ರೋಗಿಗಳು ಬರದಿದ್ದರೆ ವೈದ್ಯರು ದಡ್ಡರಾಗುತ್ತಾರೆ

h28-ESIC1
Published on

ಹುಬ್ಬಳ್ಳಿ: ‘ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರೆ ಶಿಕ್ಷಕರು ದಡ್ಡರಾಗುತ್ತಾರೆ. ಹಾಗೆಯೇ ರೋಗಿಗಳು ಬರದಿದ್ದರೆ ವೈದ್ಯರು ದಡ್ಡರಾಗುತ್ತಾರೆ...’

ಶುಕ್ರವಾರ ಬೆಳಗ್ಗೆ ಇಲ್ಲಿಯ ನೌಕರರ ರಾಜ್ಯ ವಿಮಾ ನಿಗಮ (ಇಎಸ್​ಐಸಿ)ದ ಆಸ್ಪತ್ರೆಗೆ ಭೇಟಿ ನೀಡಿದ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅಲ್ಲಿಯ ಕಾರ್ಯನಿರ್ವಹಣೆ ಬಗ್ಗೆ ಈ ರೀತಿ ಅಸಮಾಧಾನ ಹೊರ ಹಾಕಿದರು.

ನಿತ್ಯ ಎಷ್ಟು ಜನರು ಆಸ್ಪತ್ರೆಗೆ ಬರುತ್ತಾರೆ ಎಂದು ಸಚಿವರು ಕೇಳಿದರು. 150-200 ಜನ ಆಸ್ಪತ್ರೆಗೆ ಬರುತ್ತಾರೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಸುರೇಶ ಉತ್ತರಿಸಿದರು.

ಇಷ್ಟು ದೊಡ್ಡ ಕಟ್ಟಡವಿದೆ. ಸಾಕಷ್ಟು ಔಷಧ ಪೂರೈಸುತ್ತೇವೆ. ಹೀಗಿದ್ದೂ ದಿನಕ್ಕೆ 150-200 ರೋಗಿಗಳನ್ನು ಉಪಚರಿಸುತ್ತೀರಿ ಅಂದರೆ ಹೇಗೆ? ಇಎಸ್​ಐ ಕಾರ್ಡ್ ಇದ್ದವರಿಗೆ ಚಿಕಿತ್ಸೆ ನೀಡಬೇಕೇನೂ ಸರಿ. ಆದರೆ, ಕಾರ್ಡ್ ಇಲ್ಲದವರಿಗೆ ಚಿಕಿತ್ಸೆ ನೀಡಬಾರದು ಎಂದು ರೂಲ್ಸ್ ಇದೆಯಾ? ಇಲ್ಲಿಯ ಚಿಕಿತ್ಸೆ ನಿರಾಕರಿಸಿ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸುತ್ತಿರುವ ಬಗ್ಗೆ ದೂರುಗಳಿವೆ ಎಂದು ಸಚಿವರು ಹೇಳಿದರು.

ಕರೊನಾ ಕಾಲಿಡುವ ಪೂರ್ವ ಆಸ್ಪತ್ರೆಗೆ ನಿತ್ಯ 450-500 ಜನ ರೋಗಿಗಳು ಬರುತ್ತಿದ್ದರು. ಈಗ ಕಡಿಮೆಯಾಗಿದೆ ಎಂದು ವೈದ್ಯರು ಸಮಜಾಯಿಷಿ ನೀಡಿದರು. ‘ಕರೊನಾ ಹಾವಳಿ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಕೆಮ್ಮು, ನೆಗಡಿ, ಜ್ವರದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಹೀಗಿರುವಾಗ ಇಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಬೇಕಿತ್ತು. ಕಡಿಮೆಯಾಗಿದ್ದು ಹೇಗೆ?’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಪ್ರಶ್ನಿಸಿದರು.

ಐಸಿಯು, ವೆಂಟಿಲೇಟರ್ ಇಲ್ಲ: ಇಎಸ್​ಐಸಿ ಆಸ್ಪತ್ರೆಯಲ್ಲಿ ಐಸಿಯು ಸೆಟ್ ಅಪ್, ವೆಂಟಿಲೇಟರ್ಸ್ ಇಲ್ಲ. ಫಿಜಿಶಿಯನ್, ತಜ್ಞ ವೈದ್ಯರ ನೇಮಕಾತಿ ಆಗಿಲ್ಲ. ಶೇ. 50ರಷ್ಟು ಸಿಬ್ಬಂದಿ ಕೊರತೆ ಇದೆ. ಇದ್ದ ಒಬ್ಬ ಸರ್ಜನ್ (ಡಾ. ಯೂನುಸ್) ನಿಯೋಜನೆ ಮೇರೆಗೆ ವರೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕರು ವಿವರಣೆ ನೀಡಿದರು.

ವರೂರಿನಲ್ಲಿ ಸರ್ಜನ್ ಅವಶ್ಯಕತೆ ಇದೆಯೇ? ಇದ್ದ ಒಬ್ಬ ಸರ್ಜನ್ ಅವರನ್ನು ನಿಯೋಜನೆ ಮೇರೆಗೆ ಅಲ್ಲಿಗೆ ಕಳುಹಿಸಿದ್ದು ಯಾರು? ಎಂದು ಸಚಿವ ಶಿವರಾಮ ಹೆಬ್ಬಾರ ಪ್ರಶ್ನಿಸಿದರು.

ಇತ್ತೀಚೆಗೆ ಕೆಪಿಎಸ್​ಸಿ ಮೂಲಕ 150 ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿದ್ದೇವೆ. ಅದರಲ್ಲಿ 11 ಜನರನ್ನು ಹುಬ್ಬಳ್ಳಿಗೆ ಕಳುಹಿಸಿದ್ದೇವೆ. ಪ್ರತಿಯೊಬ್ಬರೂ ಬೆಂಗಳೂರಿನಲ್ಲೇ ಪೋಸ್ಟಿಂಗ್ ಬಯಸಿ 4-5 ಶಾಸಕರು, ಸಚಿವರ ಶಿಫಾರಸು ಪತ್ರ ತಂದಿದ್ದರು. ಯಾರಿಗೂ ಬೆಂಗಳೂರು ಬಿಟ್ಟು ಬೇರೆಡೆ ಕೆಲಸ ಮಾಡಲು ಮನಸ್ಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ 6ರಿಂದ 8 ಕೋ. ರೂ. ಖರ್ಚು ಮಾಡಿದರೆ ಅಗತ್ಯ ಚಿಕಿತ್ಸೆಗಳನ್ನು ಕೊಡಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಇಎಸ್​ಐಸಿ ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಮಾನವೀಯ ಅಂತಃಕರಣದಿಂದ ವೈದ್ಯರು ಚಿಕಿತ್ಸೆ ನೀಡಬೇಕು. ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಾಜರಾತಿ ದಾಖಲಿಸಿ ಬಳಿಕ ಸೇವೆಗೆ ಗೈರಾಗುವ ಪ್ರವೃತ್ತಿಯನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ವೈದ್ಯರು ಗೈರಾಗಿದ್ದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಮಾಜಿ ಮೇಯರ್ ಸುಧೀರ ಸರಾಫ್, ಸದಾನಂದ ಡಂಗನವರ, ಲಿಂಗರಾಜ ಪಾಟೀಲ, ಲಕ್ಷ್ಮಣ ಗಂಡಗಾಳೇಕರ, ಕಾರ್ವಿುಕ ಆಯುಕ್ತ ಅಕ್ರಂ ಪಾಷಾ, ಉಪ ವೈದ್ಯಕೀಯ ಅಧೀಕ್ಷಕ ಡಾ. ಜಗದೀಶ ಹುರಳಿ, ಬೆಳಗಾವಿ ಪ್ರಾದೇಶಿಕ ಕಾರ್ವಿುಕ ಆಯುಕ್ತ ವೆಂಕಟೇಶ ಸಿಂಧಿಹಟ್ಟಿ, ಇತರರು ಇದ್ದರು.

ಏಕೆ ಬಳಕೆ ಮಾಡಿಕೊಂಡಿಲ್ಲ?
ಕರೊನಾ ರೋಗಿಗಳ ಚಿಕಿತ್ಸೆಗಾಗಿ ಇಎಸ್​ಐಸಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಿದ್ದರೂ ಇಲ್ಲಿಯವರೆಗೂ ಬಳಕೆ ಮಾಡಿಕೊಳ್ಳದಿರುವ ಬಗ್ಗೆ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಧಾರವಾಡ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ ಎಂದು ವೈದ್ಯರು ಮಾಹಿತಿ ನೀಡಿದರು. ಕಿಮ್್ಸ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ ಎಂದು ಅಲ್ಲಿಯ ನಿರ್ದೇಶಕರು ಹೇಳುತ್ತಾರೆ. ಆದರೆ, ಇಲ್ಲಿ ಬೆಡ್ ಸಿದ್ಧಪಡಿಸಿ 2 ತಿಂಗಳಾದರೂ ಬಳಸಿಕೊಂಡಿಲ್ಲ ಏಕೆ? ಈ ಕುರಿತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಹೇಳುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net