ರೋಗಿ ಇರುವ ಪ್ರದೇಶ ಸೀಲ್​ಡೌನ್

19SIRSI3
Published on

ಶಿರಸಿ: ಜಿಲ್ಲೆಯ ಯಾವುದೇ ಭಾಗದಲ್ಲಿ ಕರೊನಾ ರೋಗಿ ಕಂಡುಬಂದರೆ ಆ ಭಾಗವನ್ನು ಸೀಲ್​ಡೌನ್ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

2016-17ನೇ ಸಾಲಿನ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಹಾಗೂ ಆರ್​ಡಿಪಿಆರ್ ನಿಧಿಯಡಿ 44 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಹಲಗದ್ದೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕನ್ನಡ ಕೋವಿಡ ಮುಕ್ತ ಜಿಲ್ಲೆಯಾಗಿ ಘೊಷಿಸುವ ಸಂದರ್ಭದಲ್ಲಿಯೇ ಮತ್ತೆ ಕರೊನಾ ವಿಸ್ತರಣೆ ಆಗುತ್ತಿದೆ. ಹೊರ ರಾಜ್ಯಗಳ ರೆಡ್ ಜೋನ್ ಪ್ರದೇಶದಿಂದ ಬಂದ ವ್ಯಕ್ತಿಗಳಿಂದ ಜಿಲ್ಲೆಯ ವಿವಿಧೆಡೆ ರೋಗ ವಿಸ್ತರಿಸಿದೆ. ಈಗಾಗಲೇ ಭಟ್ಕಳ ಸೇರಿ ಜಿಲ್ಲೆಯ ವಿವಿಧ ತಾಲೂಕುಗಳ 7 ಕಡೆ ಸೀಲ್ ಡೌನ್ ಮಾಡಲಾಗಿದೆ ಎಂದರು.
ಮೇ ಅಂತ್ಯ ಮತ್ತು ಜೂನ್ ತಿಂಗಳಲ್ಲಿ ಕರೊನಾ ಇನ್ನಷ್ಟು ಹೆಚ್ಚುವ ಆತಂಕವಿದೆ. ಇದನ್ನು ನಿಯಂತ್ರಿಸಲು ದೈಹಿಕ ಅಂತರ ಕಾಪಾಡಿಕೊಳ್ಳುವ ಜತೆ ನಮ್ಮ ನೆರೆಹೊರೆಗೆ ಹೊರ ಪ್ರದೇಶದಿಂದ ಆಗಮಿಸುವವರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡುವ ಕಾರ್ಯ ಪ್ರತಿಯೊಬ್ಬ ಸಾರ್ವಜನಿಕರಿಂದ ಆಗಬೇಕು ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಸದಸ್ಯರಾದ ನರಸಿಂಹ ಹೆಗಡೆ, ಸುರೇಶ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ಎಫ್.ಜಿ. ಚಿನ್ನಣ್ಣನವರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಾ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ನಾಯ್ಕ, ಉಪಾಧ್ಯಕ್ಷೆ ಶೈಲಾ ತಳವಾರ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ರಾಮಚಂದ್ರ ಗಾಂವಕರ, ಕೃಷ್ಣ ಕೊಡಿಯಾ ಇತರರಿದ್ದರು. ಈ ವೇಳೆ ಪಂಚಾಯಿತಿ ಕಟ್ಟಡಕ್ಕೆ ಸ್ಥಳ ದಾನ ಮಾಡಿದ ದಾನಿ ಉಲ್ಲಾಸ ತೇಲಂಗ ಅವರನ್ನು ಗೌರವಿಸಲಾಯಿತು. ಬಳಿಕ ಭಾಶಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.

31ರೊಳಗೆ ಸಾಲ ಮರು ಪಾವತಿಸಿ
ಮೇ 31ರೊಳಗೆ ಸಾಲ ಮರು ಪಾವತಿಸಿ, 10 ದಿನಗಳೊಳಗೆ ಮತ್ತೆ ಸಾಲ ಪಡೆಯಿರಿ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಮಂಗಳವಾರ ಹೊಲಗದ್ದೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಬಾರ್ಡ್ ಹಾಗೂ ಆರ್​ಬಿಐ ಸೂಚನೆಯಂತೆ ಮೇ 31ರೊಳಗೆ ರೈತರು ಸಾಲ ಮರುಪಾವತಿ ಮಾಡಿದರೆ ಮಾತ್ರ ಶೇಕಡಾ 5ರ ಬಡ್ಡಿ ರಿಯಾಯಿತಿ ಸಿಗುತ್ತದೆ. ಒಂದೊಮ್ಮೆ ಸೂಚನೆ ಪಾಲಿಸದಿದ್ದರೆ ಈ ಸೌಲಭ್ಯ ಸಿಗುವುದಿಲ್ಲ. ಆದರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೆಡಿಸಿಸಿ ಬ್ಯಾಂಕ್ ಪ್ರಮುಖರ ಜತೆ ರ್ಚಚಿಸಿದ್ದು, ತ್ವರಿತವಾಗಿ ಸಾಲ ನೀಡುವಂತೆಯೂ ಸೂಚಿಸಲಾಗಿದೆ ಎಂದರು. ನಗರ ಸ್ಥಳೀಯ ಸಂಸ್ಥೆಗಳ ಕರವನ್ನು ಕಾನೂನಿನಂತೆ ಶೇಕಡಾ 30ರಷ್ಟು ಹೆಚ್ಚಿಸಲಾಗಿತ್ತು. ಆದರೆ ಅದಕ್ಕೆ ತಾತ್ಕಾಲಿಕ ತಡೆ ನೀಡಲಾಗಿದರೂ ಕೆಲವೆಡೆ ತಂತ್ರಾಂಶದಲ್ಲಿ ಹೊಸ ಕರದ ಮಾನದಂಡವೇ ಪರಿಗಣಿತ ಆಗುತ್ತಿದೆ. ಈ ಬಗ್ಗೆ ಮೇ 20ರಂದು ಬೆಂಗಳೂರಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ರ್ಚಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net