

ಗೋಣಿಕೊಪ್ಪ: ಗೋಣಿಕೊಪ್ಪ ಕಾಫಿ ಮಂಡಳಿ, ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಕಾಫಿ ಬೆಳೆ ಕುರಿತ ವಿಚಾರ ಸಂಕಿರಣವನ್ನು ಫಾರ್ಮರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಬಾಳೆಲೆ ಭಾಗದಲ್ಲಿ 10,000 ಹೆಕ್ಟೇರ್ ಪ್ರದೇಶದಲ್ಲಿ ರೊಬಾಸ್ಟಾ ಕಾಫಿ ಬೆಳೆಯಲಾಗುತ್ತಿದ್ದು, ಮರುನಾಟಿ, ಕಾಫಿ ಒಣಗಿಸಲು ಸಿಮೆಂಟ್ ಕಣ, ತೋಟಕ್ಕೆ ನೀರು ಹಾರಿಸಲು ಪಂಪ್‌ಸೆಟ್ ವ್ಯವಸ್ಥೆ ಕುರಿತು ಕಾಫಿ ಮಂಡಳಿ ವಿಜ್ಞಾನಿ ಡಾ.ಮುಖಾಲಿಬ್ ಮಾಹಿತಿ ನೀಡಿದರು.
ಬಾಳೆಲೆಯನ್ನು ರೊಬಾಸ್ಟಾ ಬೆಳೆಯುವ ಭಾಗವೆಂದು ಗುರುತಿಸಲಾಗಿದ್ದು, ಈ ಭಾಗದಲ್ಲಿ ಹೊಸದಾಗಿ ತೋಟ ಮಾಡುವವರಿಗೆ ರೊಬಾಸ್ಟಾ ತಳಿಗೆ ಮಾತ್ರ ಸಹಾಯಧನ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಏರುಪೇರಾಗುತ್ತಿದ್ದು, ತೋಟಗಳಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ನೆರಳಿನ ವ್ಯವಸ್ಥೆ ಬೇಕಿದೆ ಎಂದರು.
ಪ್ಸಕ್ತ ವರ್ಷ ಬೇಸಿಗೆಯಲ್ಲಿ ತಾಪಮಾನ ಗರಿಷ್ಠ 36 ಡಿಗ್ರಿಯಷ್ಟು ದಾಖಲಾಗಿದೆ. ಹೂಮಳೆ ಫೆಬ್ರವರಿ ಎರಡನೇ ವಾರದಲ್ಲಿ ಮಾಡಬೇಕಾಗಿದ್ದು, ಒಂದು ವೇಳೆ ಜನವರಿಯಲ್ಲಿ ಮಳೆ ಬಿದ್ದರೆ 40 ದಿನಗಳ ನಂತರ ಹೂಮಳೆಗೆ ಸಮಯ ನಿಗದಿ ಮಾಡಬೇಕು. ಹೂಮಳೆಯ ನಂತರ 20 ದಿನ ಕಾದು ಮತ್ತೊಮ್ಮೆ ನೀರು ಹಾಯಿಸಿ ಮುಂಗಾರು ಮಳೆ ಬೀಳುವ ತನಕ ಪ್ರತಿ 20 ದಿನಕ್ಕೊಮ್ಮೆ ನೀರು ಕೊಡಬೇಕು ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕಾರ್ಯದರ್ಶಿ ಅದೇಂಗಡ ಮಂದಣ್ಣ, ಹಿರಿಯ ವಿಸ್ತರಣಾಧಿಕಾರಿ ರಮಣ್ ಇತರರು ಹಾಜರಿದ್ದರು.