

ಆನಂದ ಅಂಗಡಿ ಹುಬ್ಬಳ್ಳಿ
ರೈಲು ಪ್ರಯಾಣಿಕರ ಸುರಕ್ಷತೆ, ರೈಲ್ವೆ ಆಸ್ತಿ ರಕ್ಷಣೆ ಹಾಗೂ ಶಂಕಾಸ್ಪದ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಡುವುದಕ್ಕಾಗಿ ನೈಋತ್ಯ ರೈಲ್ವೆ ವಲಯ ಡ್ರೋಣ್ ಕ್ಯಾಮರಾ ಮೊರೆ ಹೋಗಿದೆ.
ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಲಯ ವ್ಯಾಪ್ತಿಯಲ್ಲಿ ವಾರಕ್ಕೆ ಒಂದು ಬಾರಿಯಂತೆ ಪ್ರತಿ ವಲಯದಲ್ಲಿ ರೈಲ್ವೆ ರಕ್ಷಣಾ ದಳ (ಆರ್ಪಿಎಫ್) ಸಿಬ್ಬಂದಿ ಈ ಕ್ಯಾಮರಾ ಉಪಯೋಗಿಸಲಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನೈಋತ್ಯ ರೈಲ್ವೆ ವಲಯದ ಬಹುತೇಕ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಲಾಗಿತ್ತು. ರೈಲ್ವೆ ಹಳಿ ಉದ್ದಕ್ಕೂ ನಡೆಯುವ ಚಟುವಟಿಕೆ, ಹಳಿಗಳ ಉದ್ದಕ್ಕೂ ಇಟ್ಟಿರುವ ರೈಲ್ವೆ ಸಾಮಗ್ರಿ, ರೈಲ್ವೆ ಯಾರ್ಡ್, ಬೋಗಿ, ಆಸನಗಳ ರಕ್ಷಣೆ, ರೈಲ್ವೆ ಆಸ್ತಿಗಳು ಅತಿಕ್ರಮಣಗೊಳ್ಳದಂತೆ ತಡೆಯುವುದಕ್ಕಾಗಿ ಈ ಕ್ಯಾಮರಾ ಉಪಯೋಗವಾಗಲಿದೆ. ರೈಲ್ವೆ ಸುರಕ್ಷತೆ ಹಾಗೂ ಆಸ್ತಿಯ ವಿವರ ಸಂಗ್ರಹದ ಜತೆಗೆ ವಿವಿಧ ಬಗೆಯ ಸಾಕ್ಷಿಗಳ ಸಂಗ್ರಹಕ್ಕೂ ಬಳಕೆಯಾಗಲಿದೆ.
ಅಂದಾಜು 10-15 ಮೀಟರ್ ಎತ್ತರದಿಂದ ನಿಖರವಾದ ಎಚ್ಡಿ ವಿಡಿಯೋ ಹಾಗೂ ಫೋಟೋ ಚಿತ್ರೀಕರಿಸುವ ಸಾಮರ್ಥ್ಯವುಳ್ಳ 20 ಮೆಗಾ ಪಿಕ್ಸಲ್ನ ಕ್ಯಾಮರಾಗಳು ಡ್ರೋಣ್ನಲ್ಲಿವೆ. 5 ದಿಕ್ಕುಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕಡಿಮೆ ಶಬ್ದ ಮಾಡುವ ಈ ಕ್ಯಾಮರಾ, ಬಹಳ ಸಮಯದವರೆಗೆ ಹಾರಾಡಬಲ್ಲದು.
ಈ ವಾರ ಹುಬ್ಬಳ್ಳಿಯ ವಿವಿಧೆಡೆ ಇದು ಬಳಕೆಯಾಗಲಿದೆ. ಮುಂದಿನ 2 ವಾರಗಳಲ್ಲಿ ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿ ಉಪಯೋಗವಾಗಲಿದೆ. ಡ್ರೋಣ್ ಬಳಕೆ ಬಗ್ಗೆ ಈಗಾಗಲೇ ಆರ್ಪಿಎಫ್ ನಿಲ್ದಾಣದ ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಯಶವಂತಪುರ ನಿಲ್ದಾಣಗಳಿಗೆ ತಲಾ 2ರಂತೆ ಒಟ್ಟು 4 ಡ್ರೋಣ್ ಕ್ಯಾಮರಾಗಳನ್ನು ಖರೀದಿಸುವ ಉದ್ದೇಶ ವಲಯದ ಅಧಿಕಾರಿಗಳಿಗೆ ಈ ಮೊದಲು ಇತ್ತು. ಆದರೆ, ಸದ್ಯಕ್ಕೆ ಇಡಿ ನೈಋತ್ಯ ರೈಲ್ವೆ ವಲಯಕ್ಕೆ ಒಂದು ಡ್ರೋಣ್ ಖರೀದಿಸಲಾಗಿದ್ದು, ಸರದಿಯಂತೆ ಒಂದೊಂದು ವಿಭಾಗದಲ್ಲಿ ಇದರ ಬಳಕೆಯಾಗಲಿದೆ.
ಅಗತ್ಯ ಎನಿಸಿದರೆ ಮೂರೂ ರೈಲ್ವೆ ವಿಭಾಗಗಳಿಗೆ ಒಂದೊಂದು ಖರೀದಿಸುವಂತೆ ನೈಋತ್ಯ ರೈಲ್ವೆ ವಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ರೈಲ್ವೆ ಆಸ್ತಿಗಳ ರಕ್ಷಣೆ ಹಾಗೂ ಪ್ರಯಾಣಿಕರ ಸುರಕ್ಷತೆಯಲ್ಲಿ ಡ್ರೋಣ್ ಕ್ಯಾಮರಾ ಮಹತ್ವದ ಪಾತ್ರ ವಹಿಸಲಿದೆ. ನೈಋತ್ಯ ರೈಲ್ವೆ ಆರ್ಪಿಎಫ್ನ ಐಜಿ ಡಿ.ಬಿ. ಖಾಸರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. | ವಲ್ಲೇಶ್ವರ ಡಿವಿಜನಲ್ ಸೆಕ್ಯುರಿಟಿ ಕಮಿಷನರ್, ಆರ್ಪಿಎಫ್, ಹುಬ್ಬಳ್ಳಿ