

ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ವರ್ಕ್ಶಾಪ್ ಅನ್ನು ಸ್ವಚ್ಛ ಹಾಗೂ ಹಸಿರುಮಯವನ್ನಾಗಿಸುವ ಮೂಲಕ ತನ್ನ ವ್ಯಾಪ್ತಿಯ ಜಾಗವನ್ನು ಹಸಿರಾಗಿಸುವ ಕಾರ್ಯಕ್ಕೆ ನೈಋತ್ಯ ರೈಲ್ವೆ ವಲಯ ಮುಂದಾಗಿದೆ.
ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಪಾಕ್ಷಿಕ ಯೋಜನೆಯಡಿ ರೈಲ್ವೆ ನಿಲ್ದಾಣ, ಕಾಲನಿ, ಕಚೇರಿ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದ್ದ ನೈಋತ್ಯ ರೈಲ್ವೆ ವಲಯ, ಇದೀಗ ಎಲ್ಲೆಡೆ ಹಸಿರುಮಯ ವಾತಾವರಣ ನಿರ್ವಿುಸುವ ಯೋಜನೆಗೆ ಚಾಲನೆ ನೀಡಿದೆ.
ಹುಬ್ಬಳ್ಳಿ ವರ್ಕ್ಶಾಪ್ನ ಮೆಕಾನಿಕಲ್ಸ್ ಸ್ಟೋರ್ಸ್ ಡಿಪೊ ಗೇಟ್ ಬಳಿಯ ಅಂದಾಜು 350 ಚ. ಅಡಿಯ ಜಾಗವನ್ನು ಹಸಿರನ್ನಾಗಿಸಿ, ಅದಕ್ಕೆ ‘ವಸುಂಧರಾ ನರ್ಸರಿ’ ಎಂದು ನಾಮಕಾರಣ ಮಾಡಲಾಗಿದೆ.
ಅಂದಾಜು 4.5 ಲಕ್ಷ ರೂ. ವೆಚ್ಚದಡಿ ವಿವಿಧ ಸಸಿ, ಔಷಧ ಗಿಡಗಳನ್ನು ಬೆಳೆಸಲಾಗಿದೆ. ಹಸಿರು ಮನೆಗಳನ್ನು ನಿರ್ವಿುಸಿ, ಸಸಿಗಳಿಗೆ ಅಗತ್ಯವಿರುವಂತೆ ತಂಪು ಅಥವಾ ಬಿಸಿ ವಾತಾವರಣ ನಿರ್ವಿುಸಲಾಗಿದೆ. ಮಲ್ಲಿಗೆ, ಗುಲಾಬಿ ಸೇರಿದಂತೆ ವಿವಿಧ ಹೂಗಳು, ಶಂಖಪುಷ್ಪದಂತಹ ವೈದ್ಯಕೀಯ ಬಳಕೆಗೆ ಉಪಯೋಗವಾಗುವ ಸಸಿಗಳು ಇಲ್ಲಿವೆ.
ವಸುಂಧರಾ ನರ್ಸರಿ ಉದ್ಘಾಟಿಸಿ ಮಾತನಾಡಿದ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್, ಮನೆ ಹಾಗೂ ಕಚೇರಿಗಳಲ್ಲಿ ಸಸಿಗಳನ್ನು ಬೆಳೆಸುವ ಮೂಲಕ ಆರೋಗ್ಯಕರ ವಾತಾವರಣ ನಿರ್ವಿುಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಕೈಗೊಂಡ ಕಾರ್ಯಗಳು, ಸೋಂಕಿತರ ಚಿಕಿತ್ಸೆಗಾಗಿ ವರ್ಕ್ಶಾಪ್ ನಿರ್ವಿುಸಿದ ಬೋಗಿಗಳು ಹಾಗೂ ಇತರ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ ಇತರರು ಹಾಜರಿದ್ದರು.