ರೈಲ್ವೆ: ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯೂ ಇಲ್ಲ, ಸಹಕಾರವನ್ನೂ ಕೊಡುತ್ತಿಲ್ಲ: ವಿ.ಸೋಮಣ್ಣ

somanna
Published on

ಮೈಸೂರು: ಬೆಳಗಾವಿ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ ರೈಲನ್ನು ಮೈಸೂರಿನವರೆಗೆ ವಿಸ್ತರಿಸುವ ಕುರಿತು ಆಲೋಚನೆ ಇದೆ. ಈ ಬೇಡಿಕೆಯನ್ನು ಕಾರ್ಯಗತಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಲಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೆಂಗಳೂರು-ತುಮಕೂರು ನಡುವಿನ ನಾಲ್ಕು ಪಥ ರೈಲು ಮಾರ್ಗ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೊತ್ತಿಕೊಳ್ಳಲಾಗುವುದು. ಈ ಕುರಿತು ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಸುತ್ತಲಿನ ನೂರು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನು ಮೂರು ವರ್ಷದಲ್ಲಿ ರೈಲ್ವೆ ಲೆವಲ್ ಕ್ರಾಸಿಂಗ್ ಇರಲ್ಲ. ಮೈಸೂರು- ಬೆಂಗಳೂರಿನ ಮಾರ್ಗದಲ್ಲೂ ಇವುಗಳು ಇರಲ್ಲ. ಇವುಗಳ ಸಂಖ್ಯೆಯನ್ನು ಈಗಾಗಲೇ 170ರಿಂದ 100ಕ್ಕೆ ತಗ್ಗಿಸಲಾಗಿದೆ. ಉಳಿದ ಕಡೆ ಕೆಳಸೇತುವೆ, ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಮೈಸೂರು-ಕುಶಾಲನಗರ ರೈಲು ಮಾರ್ಗ ಸ್ಥಗಿತ

ಚಾಮರಾಜನಗರ -ಮೆಟ್ಟುಪಾಳ್ಯಂ ರೈಲು ಮಾರ್ಗ ಮತ್ತು ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆ ಸ್ಥಗಿತಗೊಂಡಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸಿಎಂರಿಂದ ಹಿಡಿದು ಸಂಬಂಧಪಟ್ಟವರಿಗೆ ನಾನೇ ಹೇಳಿದ್ದಾನೆ. ಆದರೆ, ಈ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸಹಕಾರವನ್ನೂ ಕೊಡುತ್ತಿಲ್ಲ ಎಂದು ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು

ಜಿಎಸ್‌ಟಿಯಲ್ಲಿ ರಾಜ್ಯವನ್ನು ಟಾರ್ಗೆಟ್ ಮಾಡಿಲ್ಲ

ಸೆ.22ರಿಂದ ಪರಿಸ್ಕೃತ ಜಿಎಸ್‌ಟಿ ತೆರಿಗೆ ಜಾರಿಗೆ ಬರಲಿದೆ. ಇದು ಬಿಹಾರ ಸೇರಿದಂತೆ ಯಾವುದೇ ಚುನಾವಣೆಯನ್ನು ಮುಂದಿಟ್ಟುಕೊಂಡು ಮಾಡಿರುವ ಕ್ರಮವಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಜನರ ಅನುಕೂಲಕ್ಕಾಗಿ ಜಿಎಸ್‌ಟಿಗೆ ಗಣನೀಯವಾಗಿ ಸುಧಾರಣೆ ತರಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದರು.

‘ಪರಿಷ್ಕೃತ ಜಿಎಸ್‌ಟಿ ನೀತಿಯಿಂದ ರಾಜ್ಯಕ್ಕೆ ನಷ್ಟವಾಗಲಿದೆ’ ಎಂಬ ಕಂದಾಯ ಸಚಿವ ಕೃಷ್ಣಬೈರೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ರಾಜ್ಯವನ್ನು ಟಾರ್ಗೆಟ್ ಮಾಡಿಲ್ಲ. ಜಿಎಸ್‌ಟಿ ಸಭೆಗಳು ಮುಂದುವರಿದಿವೆ. ಎರಡ್ಮೂರು ದಿನದಲ್ಲಿ ಜಿಎಸ್‌ಟಿಯ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net