

ಹಾಸನ: ರೈಲ್ವೆ ಮೇಲ್ಸೇತುವೆಯ ಒಂದು ಬದಿಯ ಕಾಮಗಾರಿ ಪೂರ್ಣಗೊಂಡು ಸಂಚಾರ ಅವಕಾಶ ಮಾಡಲಾಗಿತ್ತು.ನಂತರ ಮತ್ತೆ ರಸ್ತೆಯನ್ನು ಬಂದ್ ಮಾಡಿರುವುದ್ದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಇದನ್ನು ಸಂಚಾರ ಮುಕ್ತ ಮಾಡಲು ಒಂದು ವಾರದ ಗಡುವು ನೀಡಲಾಗುವುದು ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಚ್.ಎಂ.ಸುರೇಶ್ ಕುಮಾರ್ ಎಚ್ಚರಿಸಿದರು.
ಒಂದು ಬದಿಯ ಮಾರ್ಗದ ಕಾಮಗಾರಿ ಮುಗಿದು ವಾಹನ ಸಂಚಾರ ಆರಂಭಿಸಿ ನಂತರ ಬಂದ್ ಮಾಡಿರುವುದು ಸರಿಯಲ್ಲ.ಆದ್ದರಿಂದ
ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತೆ ರಸ್ತೆಯನ್ನು ವಾಹನ ಸಂಚಾರಕ್ಕೆ ಅವಕಾಶಕ್ಕೆ ಮುಂದಾಗಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಳೆದ ಡಿಸೆಂಬರ್‌ನಲ್ಲಿ ಕೆಲ ದಿನ ಫ್ಲೈ ಓವರ್‌ನ್ನು ಜನಬಳಕೆಗೆ ಬಿಡಲಾಗಿತ್ತು. ಎಲ್ಲಾ ವಾಹನ ಸಹ ಓಡಾಡಿದವು. ಇದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ಸಂತಸ ಪಟ್ಟಿದ್ದರು. ಆದರೆ ಇತ್ತೀಚೆಗೆ ಸಂಪೂರ್ಣ ಬಂದ್ ಮಾಡಲಾಗಿದೆ.ಇದರಿಂದ ಚನ್ನಪಟ್ಟಣ ಸೇರಿದಂತೆ ಹಲವು ನಿವಾಸಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ವಕೀಲರಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.
ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬೋರ್ಡ್ ಹಾಕಿರುವುದರಿಂದ ಸಣ್ಣ ಪುಟ್ಟ ಕಾಮಗಾರಿ ನಡೆಯುತ್ತಿರಬಹುದು, ಆ ಕಾರಣಕ್ಕೆ ಬಂದ್ ಮಾಡಲಾಗಿದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ವಾಸ್ತವಾಗಿ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದರು. ಈ ಸಂಬಂಧ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿದಾಗ 2007 ರಿಂದ ಇಲ್ಲಿಯವರೆಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ಕಾರದ ನಡುವೆ ಆಗಿರುವ ಒಪ್ಪಂದ, ನಿಯಮ ಪಾಲನೆ ಬಗ್ಗೆ ಆಗಿರುವ ಮಾತುಕತೆ ಬಗ್ಗೆ ವಿವರಿಸಿದರು. ಮೇಲ್ಸೇತುವೆ ಸಂಚಾರ ಮುಕ್ತ ಮಾಡಿದರೆ ರೈಲ್ವೆ ಗೇಟ್(ಲೆವೆಲ್-3) ಬಂದ್ ಮಾಡುವ ಬಗ್ಗೆ ಕರಾರು ಆಗಿದೆ. ಅದು ಪಾಲನೆಯಾಗದ ಕಾರಣ ಸದ್ಯ ಫ್ಲೈ ಓವರ್ ಮುಚ್ಚಲಾಗಿದೆ ಎಂದರು.
ಹೀಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಿಯೋ ಅಥವಾ ಸಚಿವರು, ಮೇಲಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸಂಚಾರ ಮುಕ್ತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ರೈಲ್ವೆ ಗೇಟ್‌ನಲ್ಲಿ ಆ್ಯಂಬುಲೆನ್ಸ್ ಬಂದರೆ ತುಂಬಾ ಕಷ್ಟವಾಗಲಿದೆ. ಮೇಲ್ಸೇತುವೆ ಇಲ್ಲದೆ ಕಳೆದ ಹಲವು ವರ್ಷಗಳಿಂದ ಜನರು ತೊಂದರೆ ಅನುಭವಿಸಿದ್ದಾರೆ. ಅದು ಮುಂದುವರಿಯುವುದು ಬೇಡ. ಕೂಡಲೇ ಜನ ಬಳಕೆಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್ ಮಾತನಾಡಿ, ಮಕ್ಕಳು, ವಕೀಲರು, ರೋಗಿಗಳು, ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಹಾಗೂ ಜನರಿಗೆ ತುಂಬಾ ತೊಂದರೆಯಾಗಿದೆ. ಈ ಹಿನ್ನೆಲೆ ಸಂಚಾರ ಮುಕ್ತಕ್ಕೆ ಶಾಸಕರು, ಸಂಸದರು ಗಮನ ಹರಿಸಬೇಕು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತೇವೆ. ಇಲ್ಲವಾದರೆ ಗ್ರಾಮಸ್ಥರೆಲ್ಲರೂ ಸೇರಿ ನಾವೇ ತೆರವು ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ರಕ್ಷಿತ್ ಇದ್ದರು.