ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿಲ್ಲ: ಸಂಸದ ಪ್ರಜ್ವಲ್ ರೇವಣ್ಣ

ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿಲ್ಲ: ಸಂಸದ ಪ್ರಜ್ವಲ್ ರೇವಣ್ಣ
Published on

ಹಾಸನ: ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮೂರು ಬಾರಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಇದೀಗ ಕೇಂದ್ರ ಸರ್ಕಾರವೇ ಆ ಹಣವನ್ನು ನೀಡಲು ಒಪ್ಪಿಗೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಸಂಸದರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ನೀಡುವುದಿಲ್ಲ ಎಂದು ಹೇಳಿದೆ. ಆ ನಂತರ ಕೇಂದ್ರದ ಬಳಿಗೆ ಹೋಗಿದ್ದೇವೆ. ಮತ್ತೆರಡು ಮಾರ್ಗದ ಮೇಲ್ಸೇತುವೆಗಾಗಿ 48 ಕೋಟಿ ರೂ. ಅನುಮೋದನೆಗೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದೇವು. ಆ ಹಣವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಸೀಟು ಹಂಚಿಕೆ ವಿಚಾರದಲ್ಲಿ ಎಚ್.ಡಿ. ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗು ಬಿಜೆಪಿ ವರಿಷ್ಠರು ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರೋ ಒಬ್ಬರು ಮಾತನಾಡಿದರೆ ಚರ್ಚೆಯಾಗುವುದಿಲ್ಲ. ಸಂಸತ್ ಅಧಿವೇಶನ ಮುಗಿದ ನಂತರ ಎಲ್ಲಾ ತೀರ್ಮಾನವಾಗುತ್ತದೆ. ಈ ವಿಚಾರದಲ್ಲಿ ಖಂಡಿತ ಸಿಹಿ ಸುದ್ದಿ ಸಿಗಲಿದೆ ಎಂದರು.
ಹಾಸನ-ಮಂಡ್ಯ ಕ್ಷೇತ್ರ ಬಿಜೆಪಿಗೆ ಸಿಗಲಿದೆ ಎಂಬ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಬಹುತೇಕ ಕಾರ್ಯಕರ್ತರು ನಮ್ಮ ಬೆಂಬಲಕ್ಕೆ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಎಲ್ಲರ ಮನಸ್ಸಿನಲ್ಲಿದೆ. ಇಲ್ಲಿ ಯಾವ ಕಾರ್ಯಕರ್ತರು, ಮುಖಂಡರಲ್ಲಿ ಗೊಂದಲವಿಲ್ಲ. ಕೆಲವರು ಅವರ ಮನಸ್ಸಿನಲ್ಲಿ ಇರುವುದನ್ನು ಹೇಳುತ್ತಿದ್ದಾರೆ, ಅದು ತಪ್ಪು ಎಂದು ನಾನು ಭಾವಿಸುವುದಿಲ್ಲ ಎಂದರು.
ರಾಜಕೀಯ ಪಿತೂರಿಗೆ ನಾನು, ಪ್ರೀತಂಗೌಡ ಬಲಿಯಾದೆವು ಎಂಬ ಮಾಜಿ ಸಚಿವ ಸಿ.ಟಿ.ರವಿ ಅಸಮಾಧಾನಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ವರು 2018ರಲ್ಲಿ 38 ಸಾವಿರ ಮತ ಪಡೆದಿದ್ದರು, ಈ ಸಲ 4 ಸಾವಿರ ತೆಗೆದುಕೊಂಡಿದ್ದಾರೆ. ಚುನಾವಣೆಯಿಂದ ಚುನಾವಣೆಗೆ ರಾಜಕೀಯ ವಿದ್ಯಮಾನ ಬದಲಾಗುತ್ತದೆ. ಚನ್ನರಾಯಪಟ್ಟಣದಲ್ಲಿ ಕಳೆದ ಚುನಾವಣೆಯಲ್ಲಿ ನಮಗೆ 49 ಸಾವಿರ ಲೀಡ್ ಬಂದಿತ್ತು, 2023 ರಲ್ಲಿ ಕೇವಲ 7 ಸಾವಿರ ಲೀಡ್ ಬಂದಿದೆ. ಒಂದೊಂದು ಚುನಾವಣೆಯಲ್ಲಿ ಬದಲಾವಣೆಯಾಗುತ್ತದೆ. ವ್ಯತ್ಯಾಸವೇ ಆಗಬಾರದು ಅಂದರೆ ಹೇಗೆ? ಸೋತಿದ್ದೇವೆ ಎನ್ನುವ ಬೇಸರದಿಂದ ಅವರು ಹಾಗೆ ಹೇಳಿರಬಹುದು. ಮುಂದಿನ ದಿನಗಳಲ್ಲಿ ಕೆಲಸ ಮಾಡಿ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅವರಿಗೂ ಭವಿಷ್ಯ ಇರುತ್ತೆ ಎಂದು ಉತ್ತರಿಸಿದರು.
ದೆಹಲಿಯಲ್ಲಿ ಕೇಂದ್ರದ ಕಾಂಗ್ರೆಸ್ ಪ್ರತಿಭಟನೆ ವಿಷಯವಾಗಿ ಪ್ರತಿಕ್ರಿಯಿಸಿ, ನಮ್ಮ ಹಕ್ಕು ನಮ್ಮ ತೆರಿಗೆ ಎನ್ನುವ ಕಾಂಗ್ರೆಸ್‌ನವರು ಜನರ ತೆರಿಗೆ ಹಣವನ್ನು ಇವರ ಉಚಿತ ಗ್ಯಾರಂಟಿಗೆ ಬಳಳಸಿಕೊಳ್ಳುತ್ತಿದ್ದಾರೆ. ಮುಂದೆ ತೆರಿಗೆ ಪಾವತಿದಾರರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದರೆ ಏನು ಮಾಡಬೇಕು? ಕೇಂದ್ರ ಸರ್ಕಾರ ಅಗತ್ಯ ಇದ್ದಾಗಲೆಲ್ಲ ನೆರವು ನೀಡಿದೆ. ಕೇಂದ್ರದಿಂದ ಅನುದಾನ ಬಂದೇ ಇಲ್ಲ ಎಂಬ ಭಾವನೆ ಮೂಡಿಸೋದು ತಪ್ಪು ಎಂದರು.
ದಕ್ಷಿಣ ಭಾರತ ಪ್ರತ್ಯೇಕವಾಗಬೇಕು ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಖಂಡಿಸಿದ ಪ್ರಜ್ವಲ್ ಅವರು, ದೇಶ ಒಡೆಯೋ ಹೇಳಿಕೆ ಯಾರೂ ಕೊಡಬಾರದು. ಇದು ಯಾರಿಗು ಶೋಭೆ ತರಲ್ಲ ಎಂದು ತಿರುಗೇಟು ನೀಡಿದರು.
ಕೇಸರಿ ಶಾಲು ಧಾರ್ಮಿಕ ಸಂಕೇತ:
ಕೇಸರಿ ಶಾಲು ಎಂದರೆ ಬಿಜೆಪಿ ಎಂದು ಯಾಕೆ ಭಾವಿಸಬೇಕು? ದೇಗುಲ ಉದ್ಘಾಟನೆ ವೇಳೆ ನಮ್ಮ ಕಾರ್ಯಕರ್ತರೇ ಕೇಸರಿ ಶಾಲು ಹಾಕುತ್ತಾರೆ. ಅದು ಧಾರ್ಮಿಕ ಸಂಕೇತ ಅಷ್ಟೆ. ಕೇಸರಿ ಶಾಲು ಹಾಕುವವರು ಬಿಜೆಪಿ ಕಾರ್ಯಕರ್ತರು ಎನ್ನಲು ಆಗುವುದಿಲ್ಲ. ಮಂಡ್ಯ ಪ್ರತಿಭಟನೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಾರೋ ಕಾರ್ಯಕರ್ತ ಬಂದು ಕೆಸರಿ ಶಾಲು ಹಾಕಿದ್ದರು. ಇದಕ್ಕೆ ತಪ್ಪಾಗಿ ತಿಳಿಯೊ ಅಗತ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net