

ನರಗುಂದ: ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾ ವರೆಗೆ ನೂತನ ರೈಲು ಮಾರ್ಗದ ಸಮೀಕ್ಷೆಗೆ ಅನುಮೋದನೆ ನೀಡುವಂತೆ ಆಗ್ರಹಿಸಿ ನರಗುಂದ ಹಾಗೂ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯಿಂದ ಹುಬ್ಬಳ್ಳಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರ ಕಾರ್ಯದರ್ಶಿ ಸುನಿಲ್ ಜಿ. ಅವರಿಗೆ ಗುರುವಾರ ಕುಷ್ಟಗಿಯಲ್ಲಿ ಮನವಿ ಸಲ್ಲಿಸಲಾಯಿತು. ಸುನಿಲ್ ಅವರು ಮಾತನಾಡಿ, ಈ ಮನವಿಯನ್ನು ಪ್ರಧಾನ ವ್ಯವಸ್ಥಾಪಕರ ಅವಗಾಹನೆಗೆ ತರಲಾಗುವುದು. ಈ ಮಾರ್ಗ ರಚನೆಯ ಬೇಡಿಕೆ ಸೂಕ್ತವಾಗಿದೆ. ಸಂಬಂಧಿಸಿದ ಸಂಸದರಿಂದ ಪ್ರಸ್ತಾಪ ಬಂದಲ್ಲಿ ರೈಲ್ವೆ ಇಲಾಖೆ ಸಮೀಕ್ಷೆಗೆ ಪರಿಗಣಿಸಲಿದೆ ಎಂದು ಭರವಸೆ ನೀಡಿದರು.