ರೈಲ್ವೆ ನಿಲ್ದಾಣ ಉನ್ನತೀಕರಣ ಸ್ವಾಗತಾರ್ಹ

14arsph2ep
ರೈಲ್ವೆ ಅಧಿಕಾರಿಗಳೊಂದಿಗೆ ಸಂಸದ ಪ್ರಜ್ವಲ್ ರೇವಣ್ಣ ಸಭೆ ನಡೆಸಿದರು. ಭರತ್ ತಿವಾರಿ, ಲೋಹಿತೇಶ್ವರ್, ಬಷೀರ್, ಪಿ.ಕೆ.ಸಿಂಗ್, ಹೊಸೂರು ಗಂಗಾಧರ್ ಇತರರು ಇದ್ದರು.
Published on

ಅರಸೀಕೆರೆ: ನಗರದ ರೈಲ್ವೆ ನಿಲ್ದಾಣ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.


ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿ, ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು ಕಲ್ಪಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನಾನು ಪತ್ರ ಬರೆದಿದ್ದು, ಮನವಿ ಸಕಾರಾತ್ಮಕ ಸ್ಪಂದನೆ ದೊರೆತಿದೆ. ವೈಫೈ, ಎಸ್ಕಲೇಟರ್, ಟಿಕೆಟ್ ಕೌಂಟರ್, ವಿಶ್ರಾಂತಿ ಗೃಹ ಸೇರಿ ಹಲವು ಸವಲತ್ತುಗಳನ್ನು ಒದಗಿಸುವ ಕಾಮಗಾರಿಗೆ ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಅರಸೀಕೆರೆ-ಮೈಸೂರು ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಅನುಮೋದನೆಗೊಳ್ಳಲಿದೆ. ಇದರಿಂದಾಗಿ ಪಾಂಡವಪುರ, ಅರಸೀಕೆರೆ ನಡುವೆ ಸುಸಜ್ಜಿತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದ್ದು, ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಜತೆಗೆ ಭಾರತ್ ಮಾಲಾ ಯೋಜನೆಯಡಿ ಶಾಂತಿಗ್ರಾಮದಿಂದ-ಹಿರಿಯೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಹೇಳಿದರು.
ರೈಲ್ವೆ ಹಿರಿಯ ಅಧಿಕಾರಿಗಳಾದ ಭರತ್ ತಿವಾರಿ, ಲೋಹಿತೇಶ್ವರ್, ಬಷೀರ್, ಸ್ಟೇಷನ್ ಮ್ಯಾನೆಜರ್ ಪಿ.ಕೆ.ಸಿಂಗ್, ಹೊಸೂರು ಗಂಗಾಧರ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್ ಇತರರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net