

ಸಾಗರ: ತಾಳಗುಪ್ಪಕ್ಕೆ ಮಂಜೂರಾಗಿರುವ ರೈಲ್ವೆ ಟರ್ವಿುನಲ್ ಅನ್ನು ಏಕಾಏಕಿ ಶಿವಮೊಗ್ಗದ ಕೋಟೆಗಂಗೂರಿಗೆ ಸ್ಥಳಾಂತರಿಸಿರುವ ಸರ್ಕಾರದ ಕ್ರಮ ಖಂಡಿಸಿ ಮಂಗಳವಾರ ತಾಲೂಕು ಕಚೇರಿ ಆವರಣದಲ್ಲಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿದರು.
ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ರೈಲ್ವೆ ಕೋಚಿಂಗ್ ಟರ್ವಿುನಲ್ ಅನ್ನು ಕೋಟೆಗಂಗೂರಿಗೆ ಸ್ಥಳಾಂತರಗೊಳ್ಳಲು ಕಾರಣ ಏನು? ಈ ಬಗ್ಗೆ ಸಾರ್ವಜನಿಕರೆದುರು ಸಾಗರ ಹಾಗೂ ಸೊರಬ ಶಾಸಕರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಯೋಜನೆಯೊಂದನ್ನು ಮಂಜೂರು ಮಾಡಿ ಅದನ್ನು ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ. ಯಾವುದೆ ಕಾರಣಕ್ಕೂ ಟರ್ವಿುನಲ್ ಕೋಟೆಗಂಗೂರಿಗೆ ಸ್ಥಳಾಂತರಿಸಬಾರದು. ತಾಳಗುಪ್ಪದಲ್ಲಿಯೇ ಸ್ಥಾಪಿಸುವಂತೆ ಎರಡೂ ಕ್ಷೇತ್ರದ ಶಾಸಕರು ಸಿಎಂ ಹಾಗೂ ಸಂಸದರ ಮೇಲೆ ಒತ್ತಡ ತರಬೇಕೆಂದರು.
ಹೋರಾಟ ಸಮಿತಿ ಸದಸ್ಯ ಎಚ್.ಬಿ.ರಾಘವೇಂದ್ರ ಮಾತನಾಡಿ, ಶಾಸಕರಾದ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರು ಮತ ನೀಡಿದ ಜನರಿಗೆ ಅನ್ಯಾಯ ಮಾಡುತ್ತಿರುವುದು ದುರಾದೃಷ್ಟಕರ. ಎರಡೂ ಕ್ಷೇತ್ರದ ಮತದಾರರು ನಿಮಗೆ ಮತ ನೀಡದಿದ್ದರೆ ನೀವು ಹೇಗೆ ಶಾಸಕರಾಗುತ್ತಿದ್ದೀರಿ? ಜನರ ಋಣ ತೀರಿಸುವ ಹೊಣೆ ನಿಮ್ಮ ಮೇಲಿದೆ ಎಂಬುದನ್ನು ಮರೆಯಬೇಡಿ ಎಂದು ಕುಟುಕಿದರು.
ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ಸರ್ಕಾರ ತನ್ನ ನಿರ್ಧಾರ ಬದಲಿಸಿ ತಾಳಗುಪ್ಪದಲ್ಲಿಯೇ ರೈಲ್ವೆ ಟರ್ವಿುನಲ್ ನಿರ್ವಿುಸಬೇಕು. ಇಲ್ಲವಾದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ರವಿ ಕುಗ್ವೆ, ಲೇಖಕ ವಿಲಿಯಂ, ಸುಧಾಕರ ಕುಗ್ವೆ, ಶಿವಾನಂದ ಕುಗ್ವೆ, ವಾಮದೇವ ಗೌಡ, ಕನ್ನಪ್ಪ ಬೆಳಲಮಕ್ಕಿ, ಅ.ರಾ.ಶ್ರೀನಿವಾಸ್, ಕನ್ನಪ್ಪ ಮುಳಕೇರಿ, ತುಕಾರಾಮ್ ಶಿರವಾಳ, ಎನ್.ಡಿ.ವಸಂತಕುಮಾರ್, ರವಿ ಜಂಬಗಾರು, ಮೈಕಲ್ ಡಿಸೋಜ, ಡಿ.ದಿನೇಶ್, ಮಂಜುನಾಥ ಚಿಪ್ಪಳಿ, ಅಣ್ಣಪ್ಪ ಬಾಳೆಗುಂಡಿ, ಪುಟ್ಟಪ್ಪ, ಎ.ಎ.ಶೇಕ್ ಇತರರಿದ್ದರು.