ರೈಲ್ವೆ ಖಾಸಗೀಕರಣ ವಿರೋಧಿಸಿ ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಸಿಐಟಿಯು ಪ್ರತಿಭಟನೆ

18CBP1
Published on

ಚಿಕ್ಕಬಳ್ಳಾಪುರ: ರೈಲ್ವೆ ಖಾಸಗೀಕರಣ ನೀತಿ ಕೈ ಬಿಡುವಂತೆ ಒತ್ತಾಯಿಸಿ ಸಿಐಟಿಯು ಸಂಘಟನೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ರೈಲ್ವೆ ಅಧೀಕ್ಷಕರ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿತು.

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಇಲಾಖೆಯನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಜಿಲ್ಲಾ ಸಿಐಟಿಯು ಉಪಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ರೈಲ್ವೆ ವ್ಯವಸ್ಥೆಯಿಂದ ಜನರಿಗೆ ಸಿಗುವ ಸೇವೆಯ ದರ ಹೆಚ್ಚಳವಾಗುತ್ತದೆ. ಪ್ರಸ್ತುತ ಪ್ರಯಾಣಿಕರು ಪ್ರಯಾಣಕ್ಕೆ ಶೇ.57ರಷ್ಟು ಹಣ ಪಾವತಿಸುತ್ತಿದ್ದು, ಸರ್ಕಾರ ಶೇ.43ರಷ್ಟು ಸಬ್ಸಿಡಿ ನೀಡುತ್ತದೆ. ಆದರೆ ಖಾಸಗೀರಣದಿಂದ ಇದೆಲ್ಲ ರದ್ದಾಗುತ್ತದೆ ಎಂದು ಕಿಡಿಕಾರಿದರು.

ರೈಲ್ವೆ ಕೋಚ್, ಗಾಲಿ ಮತ್ತು ಅಗತ್ಯವಿರುವ ಉತ್ಪಾದನಾ ಆರ್ಡರ್‌ಗಳನ್ನು ಸರ್ಕಾರ ನಿಲ್ಲಿಸುತ್ತದೆ. ಅಮೇರಿಕಾದ ಜನರಲ್ ಎಲೆಕ್ಟ್ರಿಕಲ್ ಕಂಪನಿ ಮಾದರಿ ಬಂಡವಾಳಶಾಹಿಗಳಿಗೆ ಇದು ಲಾಭವಾಗುತ್ತದೆ ಎಂದು ಆರೋಪಿಸಿದರು.

ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಸೇವೆ ನೀಡುವ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸದೇ ಸರ್ಕಾರವೇ ನಿರ್ವಹಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿದರು. ಜಿಲ್ಲಾ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಬಿ.ಸಾವಿತ್ರಮ್ಮ, ಮುಖಂಡರಾದ ಎಂ.ಪಿ.ಮುನಿವೆಂಕಟಪ್ಪ, ಅಮರನಾಥ್, ನ್ಯಾತಪ್ಪ, ಸೋಮಶೇಖರ್, ರಾಮಕೃಷ್ಣಪ್ಪ, ನರಸಿಂಹಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net