ರೈಲ್ವೆ ಕಾರ್ವಿುಕರಿಗೆ ನ್ಯಾಯ ದೊರೆಯಲಿ

h27-Shivanna
Published on

ಹುಬ್ಬಳ್ಳಿ : ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಸ್ವಚ್ಛತಾ ಕಾರ್ವಿುಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ರೈಲ್ವೆ ಸ್ವಚ್ಛತಾ ಕಾರ್ವಿುಕರಿಗೆ ಸೂಕ್ತ ರೀತಿಯಲ್ಲಿ ನ್ಯಾಯ ದೊರೆಯಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ಹೇಳಿದರು.

ಹುಬ್ಬಳ್ಳಿ ಹಾಗೂ ಇತರ ರೈಲು ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ, ಪೌರ ಕಾರ್ವಿುಕರನ್ನು ಗುತ್ತಿಗೆದಾರರು ಕೆಲಸದಿಂದ ತೆಗೆದು ಹಾಕಿರುವ ಕುರಿತು ನಗರದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ರೈಲ್ವೆ ಸ್ವಚ್ಛತಾ ಕಾರ್ವಿುಕರನ್ನು ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ವರದಿ ಅವಲೋಕನ ಮಾಡಿದ್ದೇನೆ. ಕಿಂಗ್ಸ್ ಏಜೆನ್ಸಿ ಮೇಲೆ ರೈಲ್ವೆ ಇಲಾಖೆಯು ತಪ್ಪು ಎಸಗಿದೆ. ಆಯೋಗವು ನೌಕರರನ್ನು ಕೆಲಸದಿಂದ ತೆಗೆದುಹಾಕಿರುವುದನ್ನು ಖಂಡಿಸುತ್ತದೆ. ಕಾಯ್ದೆ ಮೂಲಕ ಈ ಬಗ್ಗೆ ರೈಲ್ವೆ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.

120 ಜನರನ್ನು ಮರುನೇಮಕ ಮಾಡಿಕೊಳ್ಳಬೇಕು. ಹುಬ್ಬಳ್ಳಿ ರೈಲು ನಿಲ್ದಾಣವು ಏಷ್ಯಾದಲ್ಲಿಯೇ ದೊಡ್ಡ ಫ್ಲಾಟ್​ಫಾಮ್ರ್ ಹೊಂದಿದೆ. ಇಲ್ಲಿ ಹೆಚ್ಚಿನ ನೌಕರರ ಅಗ್ಯವಿದೆ ಎಂದು ತಿಳಿಸಿದರು.

ಕಾರ್ವಿುಕರಿಗೆ ಇಎಸ್​ಐ, ಪಿಎಫ್ ಸಿಗಬೇಕು. ಪಾಲಿಕೆ ವ್ಯಾಪ್ತಿಯಲ್ಲಿನ ಪೌರ ಕಾರ್ವಿುಕರ ಸಮಸ್ಯೆಗಳು ಬಹಳಷ್ಟಿವೆ. ಕಾರ್ವಿುಕರಿಗೆ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಪೌರ ಕಾರ್ವಿುಕರನ್ನು ಖಾಯಂ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಪೌರ ಕಾರ್ವಿುಕರಿಗೆ ಉತ್ತಮ ಆಹಾರ ನೀಡುವಂತೆ 12 ವಲಯಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೌರ ಕಾರ್ವಿುಕರಿಗೆ ಮುಂದಿನ 10 ದಿನಗಳಲ್ಲಿ ವಿಮೆ ಮಾಡಿಸಲಾಗುವುದು ಎಂದರು.

ಕೇಶವ ನಾಯ್ಕ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ಧಾರವಾಡ ತಹಸೀಲ್ದಾರ ಸಂತೋಷ ಹಿರೇಮಠ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸದಸ್ಯರಾದ ರೇಣುಕಪ್ಪ ಕೇಲೂರ, ವಿದ್ಯಾ ನರಸಪ್ಪನವರ, ಹನುಮಂತಪ್ಪ ಮಾಲಪಲ್ಲಿ, ಭೀಮರಾವ್ ಸವಣೂರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲಾಭಕ್ಷ, ಸಹಾಯಕ ನಿರ್ದೇಶಕಿ ಚೌಡಮ್ಮ ಅಂಬಿಗೇರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿ ಎಚ್. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net