ರೈಲ್ವೆ ಅಂಡರ್‌ಪಾಸ್ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

8
ರಿಂಗ್‌ರೋಡ್‌ನಲ್ಲಿರುವ ರೈಲ್ವೆ ಅಂಡರ್ ಪಾಸ್‌ನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Published on

ಮೈಸೂರು: ರಿಂಗ್‌ರೋಡ್‌ನಲ್ಲಿರುವ ರೈಲ್ವೆ ಅಂಡರ್‌ಪಾಸ್‌ನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಆರ್‌ಎಸ್ ಪಾರ್ಕ್ ಬಳಿ ಇರುವ ಹೊರವರ್ತುಲ ರಸ್ತೆಯ ರೈಲ್ವೆ ಅಂಡರ್ ಪಾಸ್ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಣಿಪಾಲ್ ಆಸ್ಪತ್ರೆಯಿಂದ ಜಿಆರ್‌ಎಸ್ ಪಾರ್ಕ್ ಮೂಲಕ ಸಾಗುವ ರಿಂಗ್‌ರಸ್ತೆಯಲ್ಲಿ ಮೂರು ಕಡೆ ರೈಲ್ವೆ ಅಂಡರ್ ಪಾಸ್‌ಗಳಿವೆ. ಆದರೆ, 15 ವರ್ಷಗಳ ಹಿಂದೆ ರೂಪಿಸಿದ ಅವೈಜ್ಞಾನಿಕ ಯೋಜನೆಯಿಂದಾಗಿ ಇಂದು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ರಿಂಗ್‌ರಸ್ತೆಯನ್ನು 4 ಪಥದ ರಸ್ತೆಯನ್ನಾಗಿ 15 ವರ್ಷದ ಹಿಂದೆ ನಿರ್ಮಿಸಿದ್ದು, ಅರಸೀಕೆರೆಗೆೆ ಸಾಗುವ ರೈಲ್ವೆ ಮಾರ್ಗ, ಬೆಲವತ್ತ ರೈಲ್ವೆ ಮಾರ್ಗ ಹಾಗೂ ಆರ್‌ಬಿಐ ಸಮೀಪದ ರೈಲ್ವೆ ಮಾರ್ಗ ಸೇರಿದಂತೆ ಮೂರು ರೈಲ್ವೆ ಅಂಡರ್ ಪಾಸ್ ಬಳಿ ರಸ್ತೆಯನ್ನು 4 ಪಥಕ್ಕೆ ಇಳಿಸಲಾಗಿದೆ. ಜತೆಗೆ ವಾಹನಗಳು ಕಿರಿದಾದ ಜಾಗದಲ್ಲಿ ಸಂಚರಿಸುವಂತಾಗಿದೆ. ಇದರಿಂದ ವಾಹನ ಸವಾರರು ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ನಿರಂತರವಾಗಿ ಅಪಘಾತಗಳಾಗಿ ಸಾವು, ನೋವುಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಿಂಗ್‌ರಸ್ತೆಯಲ್ಲಿ ಎರಡು ಬದಿಯಿಂದ ವೇಗವಾಗಿ ಬರುವ ವಾಹನಗಳು ದಾರಿ ಚಿಕ್ಕದಾಗಿರುವುದನ್ನು ಗಮನಿಸದೆ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಅಮೂಲ್ಯ ಜೀವಗಳ ಸಾವಿನ ಸರಣಿ ಇಲ್ಲಿ ಮುಂದುವರಿದೆ. ಹೀಗಾಗಿ, ಮೂರೂ ಭಾಗದಲ್ಲಿರುವ ರೈಲ್ವೆ ಅಂಡರ್‌ಪಾಸ್ ಸೇತುವೆಯನ್ನು ವಿಸ್ತರಿಸಬೇಕು. ಇಲ್ಲವಾದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುವುದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲವಾಗಿದೆ ಎಂದು ಹೇಳಿದರು.

ಅಲ್ಲದೆ, ಕೆಆರ್‌ಎಸ್ ಮಾರ್ಗದಲ್ಲಿ ಕಾಫಿ ಬೋರ್ಡ್ ಸಮೀಪ ಲೆವೆಲ್ ಕ್ರಾಸಿಂಗ್‌ನಲ್ಲಿ ಇದೇ ಪರಿಸ್ಥಿತಿ ಇದ್ದು, ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ದಸರಾ ವೇಳೆ ಉಂಟಾಗುವ ವಾಹನದಟ್ಟಣೆಯಿಂದ ನೂರಾರು ವಾಹನಗಳು ಇಲ್ಲಿ ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಆದ್ದರಿಂದ ಈ ಭಾಗದಲ್ಲಿ ತುರ್ತಾಗಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್, ಪ್ರೇಮಾ ಶಂಕರೇಗೌಡ, ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮುಖಂಡರಾದ ರಾಮಪ್ರಸಾದ್, ಪ್ರಸನ್ನ, ಪಡುವಾರಹಳ್ಳಿ ಎಂ.ರಾಮಕೃಷ್ಣ, ಫಾಲ್ಕನ್ ಬೋರೇಗೌಡ, ಸಿ.ಡಿ.ಕುಮಾರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net