ರೈಲ್ವೆ ಅಂಡರ್​ ಬ್ರಿಡ್ಜ್​ ಗೋಳು ಕೇಳೋರಿಲ್ಲ: ಪಾದಚಾರಿಗಳ ಪರದಾಟ, ಸಾರ್ವಜನಿಕರ ಹಿಡಿಶಾಪ

3
Published on

ವಿಶೇಷ ವರದಿ ತುಮಕೂರು

ಕಳೆದೆರಡು ವರ್ಷಗಳಿಂದ ಕ್ಯಾತಸಂದ್ರ ರೈಲ್ವೆ ಲೆವೆಲ್​ ಕ್ರಾಸಿಂಗ್​ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಆಗಿನಿಂದ ಸಾರ್ವಜನಿಕರು ಪಡುತ್ತಿರುವ ಪಡಿಪಾಟಲು ಇನ್ನೂ ಮುಗಿದಿಲ್ಲ. ಅಪೂರ್ಣ ಕೆಳಸೇತುವೆಯಲ್ಲಿ ತರಾತುರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸಣ್ಣ ಮಳೆ ಬಂದರೂ ನೀರು ಸಂಗ್ರಹವಾಗಿ ಈಜುಕೊಳ ಆಗುವುದರಿಂದ ರೈಲ್ವೆ ಕೆಳಸೇತುವೆಯನ್ನು (ಆರ್​ಯುಬಿ) ಬಂದ್​ ಮಾಡಲಾಗಿದೆ.

ಸಿದ್ಧಗಂಗಾ ಮಠಕ್ಕೆ ತೆರಳುವ ಮಾರ್ಗದಲ್ಲಿನ ಕ್ಯಾತಸಂದ್ರ ಲೆವೆಲ್​ ಕ್ರಾಸ್​ ಸಮಸ್ಯೆಗೆ ಮುಕ್ತಿ ಹಾಡಲು 2020ರ ಆಗಸ್ಟ್​ನಲ್ಲಿ ಕೈಗೆತ್ತಿಕೊಂಡ ರೈಲ್ವೆ ಆರ್​ಯುಬಿ ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಕೇವಲ 6 ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದ ರೈಲ್ವೆ ಇಲಾಖೆಯು, ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತದ ಅಸಹಕಾರದಿಂದ ಕೈಚೆಲ್ಲಿದೆ. ಇದರಿಂದಾಗಿ ಶ್ರೀಮಠಕ್ಕೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಓಡಾಡುವ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಜಾಗದ ತಗಾದೆ: ಕಾಮಗಾರಿ 6 ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ 2 ವರ್ಷವಾದರೂ ಮುಗಿಯದಿರುವುದಕ್ಕೆ ಖಾಸಗಿ ವ್ಯಕ್ತಿಯೊಬ್ಬರು ತೆಗೆದಿರುವ ಜಾಗದ ತಗಾದೆ ಕಾರಣ. ಕ್ಯಾತಸಂದ್ರ ಭಾಗದಲ್ಲಿ ಮೂರೂವರೆ ಗುಂಟೆ ಖಾಸಗಿ ಜಾಗದ ಮಾಲೀಕರ ಮನವೊಲಿಸಿ ಅಥವಾ ನ್ಯಾಯಾಲಯಕ್ಕೆ ಹೋಗಿ ತೆರವುಗೊಳಿಸದೆ ಜಿಲ್ಲಾಡಳಿತ ರ್ನಿಲಕ್ಷ$್ಯ ಧೋರಣೆ ಅನುಸರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.

ಕೆಲವು ತಿಂಗಳ ಹಿಂದೆ ಅಪೂರ್ಣ ರೈಲ್ವೆ ಕೆಳಸೇತುವೆಯಲ್ಲೇ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಡಲಾಗಿತ್ತು. ಮಳೆಗಾಲ ಆರಂಭವಾದಾಗಿನಿಂದ ಸಂಪೂರ್ಣ ಬಂದ್​ ಮಾಡಲಾಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ನೀರು ಸಂಗ್ರಹವಾಗಿ ಈಜುಕೊಳದಂತೆ ಆಗುವುದರಿಂದ, ರೈಲ್ವೆ ಕಂಬಿ ಅಳವಡಿಸಿ ವಾಹನ ಸಂಚಾರವನ್ನು ರ್ನಿಬಂಧಿಸಲಾಗಿದೆ.

ಸಮನ್ವಯ ಕೊರತೆಯಿಂದ ಜನ ಹೈರಾಣ: ರೈಲ್ವೆ ಇಲಾಖೆಯು ಕಾಮಗಾರಿ ಅಪೂರ್ಣಗೊಳ್ಳಲು ಜಿಲ್ಲಾಡಳಿತ ಕಾರಣ ಎಂದು ಅದರತ್ತ ಬೊಟ್ಟು ಮಾಡುತ್ತಿದೆ. ಇವರಿಬ್ಬರ ನಡುವಿನ ಸಮನ್ವಯ ಕೊರತೆಯಿಂದ ಈ ಭಾಗದ ಜನರು ಹೈರಾಣಾಗಿ ಹೋಗಿದ್ದಾರೆ. ಶ್ರೀಮಠಕ್ಕೆ ಬರುವ ಭಕ್ತರು 75&100 ರೂ. ತೆತ್ತು 3&4 ಕಿ.ಮೀ. ಸುತ್ತಿ ಮಠ ತಲುಪುವ ಸ್ಥಿತಿ ಇದೆ. ಪ್ರತಿನಿತ್ಯ ಈ ರಸ್ತೆ ಬಳಸುವವರ ಗೋಳು ರೈಲ್ವೆ ಕೆಳಸೇತುವೆ ಗ್ರಹಣ ಯಾವಾಗ ಬಿಡುಗಡೆಯಾಗುತ್ತದೋ ಎಂದು ಕಾದುಕುಳಿತುಕೊಳ್ಳುವಂತೆ ಆಗಿದೆ.

45 ಲಕ್ಷ ರೂ., ಪಾವತಿಸಿದ ರೈಲ್ವೆ ಇಲಾಖೆ

ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಕ್ಯಾತಸಂದ್ರ ಭಾಗದಲ್ಲಿ ಭೂಸ್ವಾಧಿನ ಪ್ರಕ್ರಿಯೆ ಆರಂಭದಿಂದ ತೊಡಕು ಉಂಟಾಗಿದೆ. ಕ್ಯಾತಸಂದ್ರ ಭಾಗದಲ್ಲಿ ಟೀ ಅಂಗಡಿ ಇಟ್ಟುಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬವೊಂದು ಮೂರುವರೆ ಗುಂಟೆ ಜಾಗಕ್ಕೆ ಗುಂಟೆ ಲೆಕ್ಕದಲ್ಲಿ ಪರಿಹಾರ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚದರ ಅಡಿ ಲೆಕ್ಕದಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದೆ. ರೈಲ್ವೆ ಇಲಾಖೆ ಜಿಲ್ಲಾಡಳಿತಕ್ಕೆ ಈಗಾಗಲೆ 45 ಲಕ್ಷ ರೂ. ಪಾವತಿಸಿ ಕೈತೊಳೆದುಕೊಂಡಿದೆ.

ಮತ್ತೊಂದೆಡೆ ರೈಲ್ವೆ ಫ್ಲೆಓವರ್​! ರೈಲ್ವೆ ಕೆಳಸೇತುವೆ ಕಾಮಗಾರಿ 2 ವರ್ಷವಾದರೂ ಮುಗಿಯದೇ ಜನರು ಹೈರಾಣಾಗಿದ್ದರೆ, ಮತ್ತೊಂದೆಡೆ ಕ್ಯಾತಸಂದ್ರ ಭಾಗದ ಜನರ ವಿರೋಧದ ನಡುವೆಯು ರೈಲ್ವೆ ಫ್ಲೆಓವರ್​ ನಿರ್ಮಾಣ ಕಾಮಗಾರಿಯನ್ನು ಇಲಾಖೆ ಕೈಗೊತ್ತಿಕೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಮಪಾಲಿನಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿ ರೈಲ್ವೆ ಹಳಿಯಿಂದ ಎರಡೂ ಕಡೆಗಳಲ್ಲಿ 100 ಮೀಟರ್​ನಷ್ಟು ಇರಲಿದೆ. ಒಟ್ಟಾರೆ ಜನರ ಗೋಳನ್ನು ಕೇಳೋರು ಯಾರು ಇಲ್ಲದಂತಾಗಿದೆ.

ರೈಲ್ವೆ ಕೆಳಸೇತುವೆ ಅವ್ಯವಸ್ಥೆ ಬಗ್ಗೆ ಶ್ರೀಮಠಕ್ಕೆ ಬರುವ ಎಲ್ಲ ರಾಜ್ಯ, ರಾಷ್ಟ್ರ ಮಟ್ಟದ ಜನಪ್ರತಿನಿಧಿಗಳಿಗೆ ಗಮನಸೆಳೆಯಲಾಗಿದೆ. ಇಷ್ಟಾದರೂ ಯಾರೊಬ್ಬರು ಇದನ್ನು ಪರಿಹರಿಸಲು ಮುಂದಾಗಿಲ್ಲ. ರೈಲ್ವೆ ಲೆವೆಲ್​ ಕ್ರಾಸ್​ನಲ್ಲಿ ಪಾದಚಾರಿಗಳು ಮಹಿಳೆಯರು, ಶಾಲಾಮಕ್ಕಳು, ವೃದ್ಧರು ಸರಾಗವಾಗಿ ಓಡಾಡಲು ಸಾಧ್ಯವಿಲ್ಲದಂತೆ ಆಗಿದೆ. ಹಾಗಾಗಿ, ಕ್ಯಾತಸಂದ್ರದಿಂದ ಶ್ರೀಮಠಕ್ಕೆ ಆಟೋದಲ್ಲಿ ತೆರಳಲು 100 ರೂ. ತೆರಬೇಕಾಗಿದೆ. > ಎಚ್​.ವಿ. ರಾಜಣ್ಣ, ಶ್ರೀಮಠದ ಹಳೆಯ ವಿದ್ಯಾರ್ಥಿ, ಬೆಂಗಳೂರು ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net