

ಪಾಂಡವಪುರ: ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ದುರಸ್ತಿಗೊಳಿಸುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸೋಮವಾರ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್ ಎಂ.ಶಿಲ್ಪಿ ಅಗರ್‌ವಾಲ್ ಅವರನ್ನು ಮೈಸೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು.
ಪಾಂಡವಪುರ ಪಟ್ಟಣದಿಂದ ಮಂಡ್ಯಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿರುವ ದೊಡ್ಡಬ್ಯಾಡರಹಳ್ಳಿ ಬಳಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ಅವೈಜ್ಞಾನಿಕವಾಗಿದೆ. ಮಳೆ ಸುರಿದರೆ ಅಂಡರ್ ಪಾಸ್ ರಸ್ತೆಯಲ್ಲಿ ಶೇಖರಣೆಯಾಗುವ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ನೀರು ರಸ್ತೆ ಮೇಲೆ ಮಂಡಿಯುದ್ದ ಶೇಖರಣೆಯಾಗಿ ಭಾರಿ ವಾಹನಗಳೇ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೈಕ್ ಸವಾರರಂತೂ ಅಂಡರ್ ಪಾಸ್ ದಾಟಲು ಹರಸಾಹಸಪಡಬೇಕಿದೆ. ಇದರಿಂದ ಜಮೀನುಗಳಿಗೆ ತೆರಳಲು, ಬೆಳೆದ ಬೆಳೆಯನ್ನು ಮಂಡ್ಯದ ಮಾರುಕಟ್ಟೆಗೆ ಸಾಗಿಸಲು ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರತಿನಿತ್ಯ ಮಂಡ್ಯ ಭಾಗಕ್ಕೆ ತೆರಳುವ ಸಾರ್ವಜನಿಕರು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ರಸ್ತೆ ದುರಸ್ತಿಪಡಿಸುವಂತೆ ರೈಲ್ವೆ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.
ಸಮಸ್ಯೆ ಆಲಿಸಿದ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್ ಎಂ.ಶಿಲ್ಪಿ ಅಗರ್‌ವಾಲ್ ಅವರು ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಭರವಸೆ ನೀಡಿದರು. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಕ್ಯಾತನಹಳ್ಳಿ ರಾಘವೇಂದ್ರ ಇದ್ದರು.