ರೈಲು ಸಂಚಾರ ಪುನರಾರಂಭಿಸಿ

B G Shetkar
Published on

ಬೀದರ್: ಕರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬೀದರ್-ಸಿಕಿಂದ್ರಾಬಾದ್ ಹಾಗೂ ಬೀದರ್-ಕಲಬುರಗಿ ರೈಲು ಸಂಚಾರ ಪುನರಾರಂಭಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಆಗ್ರಹಿಸಿದ್ದಾರೆ. ಈ ಕುರಿತು ದಕ್ಷಿಣ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದು, ಕೇಂದ್ರ ಸರ್ಕಾರ ದೇಶದ ಆರ್ಥಿಕ ಸ್ಥಿತಿ ಗಮನದಲ್ಲಿರಿಸಿ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ದೇಶದ ಹಲವಾರು ಕ್ಷೇತ್ರಗಳಲ್ಲಿ ಲಾಕ್ ಡೌನ್ ಮಾರ್ಗಸೂಚಿ ಸಡಿಲಿಸಿದೆ. ಕೆಲವೆಡೆ ರೈಲ್ವೆ ಸಂಚಾರ ಆರಂಭಿಸಿದೆ. ಆದರೆ ಇಲ್ಲಿನ ರೈಲು ಓಡಾಟ ಇನ್ನೂ ಆರಂಭವಾಗಿಲ್ಲ. ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಕರೊನಾದಿಂದ ತತ್ತರಿಸಿದ ಈ ಭಾಗ ಈಗ ಸ್ವಲ್ಪ ಚೇತರಿಕೆ ಕಂಡಿದೆ. ಇಲ್ಲಿನ ಜನರಿಗೆ ವ್ಯಾಪಾರ ವಹಿವಾಟು ನಡೆಸಲು ಹಾಗೂ ಅದಕ್ಕೆ ಬೇಕಾಗುವ ವಸ್ತುಗಳನ್ನು, ಕಚ್ಚಾ ಸರಕು ಖರೀದಿಸಲು ನೆರೆಯ ರಾಜ್ಯದ ಹೈದರಾಬಾದ್ ಹಾಗೂ ಕಲಬುರಗಿ ನಗರ ಅವಲಂಬಿಸಿದ್ದಾರೆ. ಹೀಗಾಗಿ ಈ ಎರಡೂ ರೈಲ್ವೆ ಸಂಚಾರವನ್ನು ಪುನಃ ಆರಂಭಿಸಲು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net