ರೈಲು ನಿಲ್ಲದ ಆಲೂರು ನಿಲ್ದಾಣ

alur raillu satation (1)
Published on

ಆಲೂರು: ಮಲೆನಾಡಿನ ಪ್ರಮುಖ ತಾಣಗಳಲ್ಲಿ ಒಂದಾಗಿರುವ ಆಲೂರಿನಲ್ಲಿ ರೈಲು ನಿಲ್ದಾಣವಿದ್ದರೂ, ಪ್ರತಿನಿತ್ಯ ಪ್ಯಾಸೆಂಜರ್ ಹಾಗೂ ಎಕ್ಸ್‌ಪ್ರೆಸ್ ಸೇರಿದಂತೆ ಹತ್ತಾರು ರೈಲುಗಳು ಚಲಿಸಿದರೂ ಒಂದೂ ರೈಲೂ ನಿಲ್ಲುತ್ತಿಲ್ಲ. ಹೌದು, ಇದು ಆಶ್ಚರ್ಯವಾದರೂ ಸತ್ಯ.

ಪ್ರತಿನಿತ್ಯ ಬಂದರು ನಾಡು ಮಂಗಳೂರಿನಿಂದ ಆಲೂರು ಮಾರ್ಗವಾಗಿ ಬೆಂಗಳೂರಿಗೆ ಪ್ರತಿನಿತ್ಯ ಹತ್ತಾರು ಪ್ಯಾಸೆಂಜರ್ ರೈಲುಗಳು ಓಡಾಟ ನಡೆಸುತ್ತವೆ. ಆದರೂ ಅದ್ಯಾಕೋ ಆಲೂರು ತಾಲೂಕಿನ ಜನರಿಗೆ ತಮ್ಮೂರಿಂದ ರೈಲು ಏರುವ ಭಾಗ್ಯವೇ ಕೂಡಿ ಬಂದಿಲ್ಲ. ಅನುಪಯುಕ್ತ ನಿಲ್ದಾಣವಾಗಿ ಮಾರ್ಪಟ್ಟಿರುವ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನವ್ಯಕ್ತಪಡಿಸಿದ್ದಾರೆ.

2009ರ ಡಿಸೆಂಬರ್‌ನಲ್ಲಿ ಆಲೂರಿಗೆ ರೈಲ್ವೆ ನಿಲ್ದಾಣವನ್ನು ಸ್ಥಾಪಿಸಲಾಯಿತು. ನಿಲ್ದಾಣ ಸ್ಥಾಪಿಸಿ ಹಲವಾರು ವರ್ಷಗಳೇ ಕಳೆದಿದ್ದರೂ ಪ್ರಯಾಣಿಕರು ಒಂದು ದಿನವೂ ರೈಲಿನಲ್ಲಿ ಪ್ರಯಾಣಿಸುವ ಭಾಗ್ಯವನ್ನು ಪಡೆಯಲಿಲ್ಲ. ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಎಂಬ ಅಪಖ್ಯಾತಿಗೆ ಹೆಸರಾಗಿರುವ ಆಲೂರು ತಾಲೂಕು ಹಲವಾರು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಪ್ರತಿನಿತ್ಯ ಬೆಂಗಳೂರು, ಮಂಗಳೂರು, ಕಾರವಾರ, ಕಣ್ಣೂರು ಕಡೆಯಿಂದ ಐದಾರು ಪ್ಯಾಸೆಂಜರ್, ಎಕ್ಸ್‌ಪ್ರೆಸ್ ರೈಲುಗಳು, ಗೊಬ್ಬರ, ಸಿಮೆಂಟ್, ಗ್ಯಾಸ್, ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನವನ್ನು ಸಾಗಣೆ ಮಾಡುವ ಹತ್ತಾರು ಗೂಡ್ಸ್ ರೈಲುಗಳು ಸಾಗುತ್ತವೆ.

ರೈಲ್ವೆ ನಿಲ್ದಾಣವು ಪಟ್ಟಣದಿಂದ 1 ಕಿ.ಮೀ. ದೂರದಲ್ಲಿದ್ದು, ಸುಸಜ್ಜಿತ ಪ್ಲಾಟ್‌ಫಾರ್ಮ್, ವಿಶ್ರಾಂತಿ ಕೊಠಡಿ, ಶೌಚಗೃಹ, ಕುಡಿಯುವ ನೀರು, ಅವಶ್ಯಕತೆ ತಕ್ಕ ಸಿಬ್ಬಂದಿಯನ್ನು ಹೊಂದಿದೆ. ಇಷ್ಟೆಲ್ಲಾ ಸೌಲಭ್ಯವಿದ್ದರೂ ಪ್ರಯಾಣಿಕರು ಕೆಎಸ್‌ಆರ್‌ಟಿ ಬಸ್ಸನ್ನೇ ಅವಲಂಬಿಸುವಂತಾಗಿದೆ.

ಪ್ರತಿನಿತ್ಯ ಮಂಗಳೂರು, ಬೆಂಗಳೂರು, ಸುಬ್ರಮಣ್ಯ ಮಾರ್ಗದ ಕಡೆಗೆ 200ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಂಗಳೂರು, ಕಾರವಾರದ ಕಡೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಸುಂದರ ಪ್ರದೇಶವನ್ನು ವೀಕ್ಷಿಸಲು ರೈಲು ಪ್ರಯಾಣ ಹೆಚ್ಚು ಅನುಕೂಲವಾಗಿದೆ.
ಪಶ್ಚಿಮ ಘಟಕ್ಕೆ ಹೊಂದಿಕೊಂಡಂತಿರುವ ಆಲೂರು ತಾಲೂಕು ಅರೆ ಮಲೆನಾಡು ಪ್ರದೇಶವಾಗಿದ್ದು, ಕಾಫಿ, ಮೆಣಸು, ಏಲಕ್ಕಿ, ಭತ್ತ, ಶುಂಠಿ, ಜೋಳ, ಆಲೂಗಡ್ಡೆ, ರೇಷ್ಮೆ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು, ಅವುಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಮಾರುಕಟ್ಟೆ ತಲುಪಬೇಕಾದ ಅನಿವಾರ್ಯತೆಯಿದೆ. ಸಕಲೇಶಪುರ ಬಿಟ್ಟರೆ ಶಿರಾಡಿಘಾಟ್ ಆರಂಭವಾಗುವುದರಿಂದ ಪ್ರಯಾಣಿಕರು ಹೆಚ್ಚು ಆಯಾಸಕ್ಕೆ ಒಳಗಾಗುತ್ತಾರೆ. ಮಳೆಗಾಲದಲ್ಲಂತೂ ದಿನವಿಡೀ ಸುರಿಯುವ ಮಳೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರ ಬದಲು ರೈಲು ನಿಲುಗಡೆ ನೀಡಿದರೆ ರೈಲಿನಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯಾಣ ಮಾಡಬಹುದು.

ವಿಜಯವಾಣಿಯೊಂದಿಗೆ ಮಾತನಾಡಿದ ಆಲೂರು ಸ್ಟೇಷನ್ ಮಾಸ್ಟರ್ ಪ್ರಶಾಂತ್ ತ್ರಿವಾಸ್ತು, ತಾಲೂಕು ಮಟ್ಟದ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಪಡೆಯಬೇಕಾದರೆ ಸರ್ಕಾರ ಕೆಲವೊಂದು ಮಾನದಂಡಗಳನ್ನು ನಿಗದಿಪಡಿಸಿದೆ. ಅವುಗಳೆಂದರೆ, ಸ್ಥಳೀಯ ಶಾಸಕ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ನಿಲುಗಡೆಯ ಅವಶ್ಯಕತೆಯ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ತಾಲೂಕಿನ ಒಟ್ಟು ಜನಸಂಖ್ಯೆ, ತಾಲೂಕಿನ ನಕ್ಷೆ, ಸ್ಥಳೀಯವಾಗಿ ಬೆಳೆದ ಬೆಳೆಗಳು, ಹೊರಗಡೆ ಕಳುಹಿಸುವುದರ ಮಾಹಿತಿ, ದಿನಕ್ಕೆ ಕನಿಷ್ಠ ಎಷ್ಟು ಜನ ಪ್ರಯಾಣಿಕರು ರೈಲಿನಲ್ಲಿ ಸಂಚರಿಸಬಹುದು ಎಂಬ ಮಾಹಿತಿಯನ್ನು ದಕ್ಷಿಣ ರೈಲ್ವೆ ಮಂಡಳಿಗೆ ನೀಡಿದರೆ ಸರ್ಕಾರದಿಂದ ಅನುಮತಿ ಸಿಕ್ಕಿ ತಾಲೂಕಿನಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net