

ಹುಬ್ಬಳ್ಳಿ: ಯಾವುದೇ ಸುಸಂಸ್ಕೃತ ಹಾಗೂ ಮುಂದುವರಿದ ರಾಷ್ಟ್ರವು ಸ್ವಚ್ಛತೆಗೆ ಆದ್ಯತೆ ನೀಡುತ್ತದೆ. ಭಾರತದಲ್ಲಿ 6 ವರ್ಷಗಳ ಹಿಂದೆ ಜಾರಿಗೆ ತಂದ ಸ್ವಚ್ಛ ಭಾರತ ಅಭಿಯಾನವು ದೇಶದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ನೈಋತ್ಯ ರೈಲ್ವೆ ಮಹಾಪ್ರಬಂಧಕ ಅಜಯ ಕುಮಾರ ಸಿಂಗ್ ಹೇಳಿದರು.
ಹುಬ್ಬಳ್ಳಿ ರೈಲು ನಿಲ್ದಾಣದ ಆವರಣದಲ್ಲಿ ಶನಿವಾರ ಸ್ವಚ್ಛತೆ ಪಾಕ್ಷಿಕ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಕೋರಿದರು. ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡ ಮಾತನಾಡಿ ಸ್ವಚ್ಛತೆ ಪಾಕ್ಷಿಕದಲ್ಲಿ ಪ್ರತಿ ನಿತ್ಯ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ. ರೈಲು ನಿಲ್ದಾಣಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ನಿಮಿತ್ತ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮದಾನದ ಮೂಲಕ ಸ್ವಚ್ಛತೆ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಹುಬ್ಬಳ್ಳಿರೈಲು ನಿಲ್ದಾಣದಲ್ಲಿ ಬಟ್ಟೆ ಬ್ಯಾಗ್ಗಳ ಮಾರಾಟ ಮಳಿಗೆಯನ್ನು ನೈಋತ್ಯ ರೈಲ್ವೆ ಮಹಿಳೆಯರ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷೆ ಸುಜಾತಾ ಸಿಂಗ್ ಉದ್ಘಾಟಿಸಿ ಹಂಪಿ ಎಕ್ಸ್ಪ್ರೆಸ್ ರೈಲಿನ ಪ್ರಯಾಣಿಕರಿಗೆ ಬಟ್ಟೆ ಬ್ಯಾಗ್ಗಳನ್ನು ವಿತರಿಸಿದರು. ಹೆಚ್ಚುವರಿ ಮಹಾಪ್ರಬಂಧಕ ಪಿ.ಕೆ. ಮಿಶ್ರಾ, ಹಿರಿಯ ಅಧಿಕಾರಿಗಳಾದ ಪಿ. ರವಿಕುಮಾರ, ಬಿ.ಜಿ. ಮಲ್ಯ, ರೂಪಾ ಶ್ರೀನಿವಾಸನ್, ವಿಪುಲ ಕುಮಾರ, ಅನಿಲ ಪವಿತ್ರನ್, ಎಂ.ಎ.ವಿ. ರಾಮಾನುಜಂ, ಜಿ.ವಿ. ನಾರಾಯಣಮೂರ್ತಿ, ಆರ್.ಎಸ್. ಚವ್ಹಾಣ, ಇತರರು ಇದ್ದರು.