ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ತಂದೆ !

0301Klb Crime-1
Published on

ಕಲಬುರಗಿ: ಏನು ಅರಿಯದ ಇಬ್ಬರು ಪುಟ್ಟ ಕಂದಮ್ಮಗಳಿಗೆ ವಿಷ ಪ್ರಾಷನ ಮಾಡಿಸಿ ಪುತ್ರಿಯರನ್ನು ಕೊಲೆ ಮಾಡಿ, ಬಳಿಕ ತಂದೆಯೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಬೈರಂಪಳ್ಳಿ ತಾಂಡಾದಲ್ಲಿ ನಡೆದಿದೆ.
ಮಿರಿಯಾಣ ಠಾಣೆ ವ್ಯಾಪ್ತಿಯ ಬರುವ ಭೈರಂಪಳ್ಳಿ ತಾಂಡಾದ ರೋಹಿತಾ (4), ಪರ್ವತಾ (2) ತಂದೆಯ ಸಂಚಿಗೆ ಬಲಿಯಾದವರು. ಸಂಜೀವ್ ಆಲಿಯಾಸ್ ಕುಮ್ಮೆಟ್ಟಿ (35) ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಡಿಪ್ಲೋಮಾ ಓದಿದ್ದ ಸಂಜೀವ ಹೈದರಾಬಾದನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಮಕ್ಕಳೊಂದಿಗೆ ಪತ್ನಿ ಊರಿನಲ್ಲಿ ಇರುತ್ತಿದ್ದಳು. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು. ಅಲ್ಲದೆ ಪತಿ-ಪತ್ನಿ ನಡುವೆ ಹೊಂದಾಣಿಕೆ ಇರಲಿಲ್ಲ ಅದರಿಂದ ಘಾಸಿಗೊಂಡು ಆತ ಹೀಗೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದರು.
ಹೈದರಾಬಾದನಿಂದ ಬೈರಂಪಳ್ಳಿ ತಾಂಡಾಕ್ಕೆ ಬಂದಿದ್ದ. ಮದ್ಯ ವ್ಯಸನಿಯೂ ಆಗಿದ್ದ ಸಂಜೀವ್ ಗುರುವಾರ ಮಧ್ಯಾಹ್ನ ತನ್ನ ಮಕ್ಕಳಿಬ್ಬರನ್ನು ಊರ ಹೊರಗಿರುವ ಹೊಲದ ಕಡೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಇಬ್ಬರು ಮಕ್ಕಳಿಗೆ ವಿಷವುಣಿಸಿದ್ದಾನೆ. ನಂತರ ಮನೆಯವರಿಗೆ ಕರೆ ಮಾಡಿ ಇಬ್ಬರು ಮಕ್ಕಳಿಗೆ ವಿಷ ಕೊಟ್ಟು, ತಾನು ವಿಷ ಕುಡಿದಿದ್ದಾಗಿ ಹೇಳಿದ್ದ. ಇಬ್ಬರು ಪುತ್ರಿಯರು ಕೊನೆಯುಸಿರೆಳೆದಾಗ ಆತ ಅಲ್ಲಿಂದ ಪರಾರಿಯಾಗಿ ಹೋಗಿದ್ದಾನೆ.
ಮನೆಯವರು ಹಾಗೂ ನೆರೆ ಹೊರೆಯುವರು ಗುರುವಾರ ಸಂಜೆವರೆಗೂ ಹುಡುಕಾಡಿದರೂ ಮಕ್ಕಳು ಹಾಗೂ ಆತ ಪತ್ತೆಯಾಗಿರಲಿಲ್ಲ. ತಡರಾತ್ರಿ ಮಕ್ಕಳಿಬ್ಬರ ಶವಗಳು ಹೊಲದಲ್ಲಿ ಪತ್ತೆಯಾಗಿದ್ದವು. ಆದರೆ ಅಲ್ಲಿ ಸಂಜೀವ ಶವವಾಗಲಿ, ಆತನಾಗಲಿ ಇರಲಿಲ್ಲ. ತಾನು ವಿಷ ಕುಡಿದಿದ್ದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದ.
ಶುಕ್ರವಾರ ಮಧ್ಯಾಹ್ನ ನೆರೆಯ ತೆಲಂಗಾಣದ ತಾಂಡೂರ ಬಳಿಯಲ್ಲಿ ರೈಲಿನ ಹಳಿಗೆ ಬಿದ್ದು ಸಂಜೀವ ಆತ್ಮಹತ್ಯೆ ಮಾಡಿಕೊಂಡಿದ್ದು, ದೇಹದ ರುಂಡ-ಮುಂಡ ಬೇರ್ಪಟ್ಟಿದೆ. ತೆಲಂಗಾಣದ ರೈಲ್ವೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತ ಭೈರಂಪಳ್ಳಿಯಲ್ಲಿ ತಂದೆಯಿಂದಲೇ ಪ್ರಾಣ ಕಳೆದುಕೊಂಡ ಇಬ್ಬರು ಪುತ್ರಿಯರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಕುಟುಂಬದವರಿಗೆ ಹಸ್ತಾಂತರಿಸಿದರು. ತಾಂಡೂರನಿಂದ ತಡರಾತ್ರಿ ಶವ ಗ್ರಾಮಕ್ಕೆ ತರುವ ಸಾಧ್ಯತೆಯಿದೆ.
ಸ್ಥಳಕ್ಕೆ ಎಸ್ಪಿ ಯಾಡಾ ಮಾರ್ಟಿನ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಎಎಸ್ಪಿ ಅಕ್ಷಯ ಹಾಕೆ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net