

ಹುಬ್ಬಳ್ಳಿ: ರೈಲ್ವೆ ತುರ್ತು ವಿಭಾಗದ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸುವುದಕ್ಕಾಗಿ ನೈಋತ್ಯ ವಲಯದ ಹುಬ್ಬಳ್ಳಿ ವಿಭಾಗದಿಂದ ಶುಕ್ರವಾರ ಕಲ್ಪಿತ ಕಾರ್ಯಾಚರಣೆ ಜರುಗಿತು.
ಕಾರ್ಯಾಚರಣೆಯ ಭಾಗವಾಗಿ ಗುಳೇದಗುಡ್ಡ ರೋಡ್ ಮತ್ತು ಬದಾಮಿ ಮಾರ್ಗ ಮಧ್ಯೆ ವಾಹನವೊಂದು ಚಲಿಸುತ್ತಿದ್ದ ರೈಲಿನ ಇಂಜಿನ್ಗೆ ಡಿಕ್ಕಿ ಹೊಡೆಯಿತು. ಇದರಿಂದ ರೈಲು ಹಳಿ ತಪ್ಪಿತು.
ಅಪಘಾತದ ಸಂದೇಶ ಪಡೆದ ಹುಬ್ಬಳ್ಳಿ ವಿಭಾಗೀಯ ಕಂಟ್ರೋಲ್ ರೂಮ್ಲ್ಲಿ ಸೈರನ್ ಮೊಳಗಿಸಿ, ತುರ್ತು ಕಾರ್ಯಾಚರಣೆಯ ಸಿಬ್ಬಂದಿಗೆ ಮಾಹಿತಿ ರವಾನಿಸಲಾಯಿತು. ಮಾಹಿತಿ ತಲುಪಿದ 20 ನಿಮಿಷಗಳಲ್ಲಿ ವಿಭಾಗೀಯ ಅಪಘಾತ ಪರಿಹಾರ ರೈಲು (ಎಆರ್ಟಿ) ಮತ್ತು ಅಪಘಾತ ಪರಿಹಾರ ವೈದ್ಯಕೀಯ ಬೋಗಿ (ಎಆರ್ಎಂವಿ) ಹುಬ್ಬಳ್ಳಿಯಿಂದ ಹೊರಟಿತು. ಅಪಘಾತದ ಹಿನ್ನೆಲೆಯಲ್ಲಿ ಸಹಾಯವಾಣಿಯನ್ನೂ ಪ್ರಾರಂಭಿಸಲಾಯಿತು.
ಅಪಘಾತದಲ್ಲಿ ಗಾಯಗೊಂಡವರ ತುರ್ತು ಚಿಕಿತ್ಸೆಗಾಗಿ ಘಟನಾ ಸ್ಥಳಕ್ಕೆ ತಲುಪಿದ ಆಂಬುಲೆನ್ಸ್, ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿತು. ಸ್ಥಳೀಯ ಪೊಲೀಸರು ಹಾಗೂ ರೈಲ್ವೆಯ ಇತರ ಸಿಬ್ಬಂದಿ 30 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ತಲುಪಿದರು.
ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ವಿಭಾಗೀಯ ಅಪರ ವ್ಯವಸ್ಥಾಪಕ ಜೋಗೇಂದ್ರ ಯಾದವೆಂದು, ಹಿರಿಯ ವಿಭಾಗೀಯ ರಕ್ಷಣಾ ಅಧಿಕಾರಿ ಜೆ.ಎಸ್. ರುದ್ರಸ್ವಾಮಿ ಸೇರಿ ರಕ್ಷಣಾ ತಂಡದವರಿದ್ದ ಎಆರ್ಟಿ ರೈಲು ಸಹ ಘಟನಾ ಸ್ಥಳಕ್ಕೆ ತಲುಪಿತು. ಅಪಘಾತ ನಿರ್ವಹಣೆಯಲ್ಲಿ ಅನುಭವ ಇರುವ ತಂಡವೂ ಸ್ಥಳಕ್ಕೆ ತೆರಳಿತು. ಹೊಸಪೇಟೆ ಮತ್ತು ವಿಜಯಪುರದಿಂದಲೂ ಅಪಘಾತ ಪರಿಹಾರ ರೈಲುಗಳು ಸ್ಥಳಕ್ಕೆ ತಲುಪಿದವು. ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿಶ್ವಾಸ ಕುಮಾರ ಹಾಗೂ ಇತರ ಹಿರಿಯ ಅಧಿಕಾರಿಗಳು ತಕ್ಷಣದ ಪರಿಹಾರ ಒದಗಿಸಿದರು.
ರಾತ್ರಿ 11.30ಕ್ಕೆ ಕಲ್ಪಿತ ಕಾರ್ಯಾಚರಣೆ ಪೂರ್ಣಗೊಂಡಿರುವ ಬಗ್ಗೆ ಪ್ರಕಟಿಸಲಾಯಿತು. ಪ್ರಧಾನ ಮುಖ್ಯ ಸುರಕ್ಷತೆ ಅಧಿಕಾರಿ ಎಂ.ಎ.ವಿ. ರಾಮಾನುಜನ್ ಮತ್ತು ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಅವರ ಮಾರ್ಗದರ್ಶನದಲ್ಲಿ ಸಂಪೂರ್ಣ ಕಲ್ಪಿತ ಕಾರ್ಯಾಚರಣೆ ನಡೆಯಿತು.
ತುರ್ತು ಪರಿಸ್ಥಿತಿ ಕಾರ್ಯವಿಧಾನ ಅಭಿವೃದ್ಧಿಪಡಿಸಲು ಮೇಲಿಂದ ಮೇಲೆ ಇಂತಹ ಕಲ್ಪಿತ ಕಾರ್ಯಾಚರಣೆಗಳನ್ನು ಕೈಗೊಳ್ಳುವುದು ಅಗತ್ಯ ಎಂದು ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ ಹೇಳಿದರು.