

ಮೈಸೂರು: ಟಿಪ್ಪು ಸುಲ್ತಾನ್ ಹೆಸರನ್ನು ರೈಲಿಗೆ ಮರು ನಾಮಕರಣ ಮಾಡಬೇಕು, ಲೋಕಸಭೆ ಮುಂಭಾಗ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ರಾಜಕೀಯ ಕಾರಣಕೋಸ್ಕರ ಟಿಪ್ಪುವಿಗೆ ಅಪಮಾನ ಮಾಡಬೇಡಿ, ಅಪಪ್ರಚಾರ ಯಾರಿಗೂ ಗೌರವ ತರುವಂತದ್ದಲ್ಲ. ಟಿಪ್ಪುವಿನ ಹೋರಾಟವನ್ನು ಕಂಡು ಆಂಗ್ಲರು ‘ಮೈಸೂರಿನ ಹುಲಿ’ ಎಂಬ ಬಿರುದ್ದನ್ನು ನೀಡಿದರು. ಹೀಗಾಗಿ ಟಿಪ್ಪು ಪ್ರತಿಮೆಯನ್ನು ಲೋಕಸಭೆ ಮುಂದೆ ನಿರ್ಮಾಣ ಮಾಡುವುದರೆ ದೇಶದ ಶಕ್ತಿ ಹೆಚ್ಚುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ರಾಜಕೀಯ ಕಾರಣಕೋಸ್ಕರ ಬದಲಾವಣೆ ಮಾಡಿರುವುದು ಸರಿಯಲ್ಲ. ಕೂಡಲೇ ಟಿಪ್ಪು ಹೆಸರನ್ನು ಮರು ನಾಮಕರಣ ಮಾಡಲು ಕ್ರಮ ವಹಿಸಬೇಕು. ಟಿಪ್ಪು ದೇಶದ ಮಹಾನ್ ಹೋರಾಟಗಾರ, ಅವರಿಗೆ ಎಲ್ಲರು ಗೌರವ ಸಲ್ಲಿಸಬೇಕು ಎಂದರು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ‘ಟಿಪ್ಪು ನಿಜ ಕಸುಗಳು’ ಕೃತಿ ರಚಿಸಿದ್ದಾರೆ. ಅವರು ರಚನೆ ಮಾಡಿರುವ ಕೃತಿಯಲ್ಲಿ ಟಿಪ್ಪುವಿನ ನಿಜ ಕನಸುಗಳು ಇಲ್ಲ, ಚರಿತ್ರೆಗೆ ಅಪಚಾರ ಮಾಡುವ ಕಾರ್ಯವನ್ನು ಕಾರ್ಯಪ್ಪ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.