

ಹಾಸನ: ಕೃಷಿ ಪ್ರಧಾನ ಕಥಾವಸ್ತು ಹೊಂದಿರುವ ಶ್ರೀಮಂತ ಸಿನಿಮಾವನ್ನು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ರೈತರೊಂದಿಗೆ ನಗರದ ಸಹ್ಯಾದ್ರಿ ಚಿತ್ರಮಂದಿರಕ್ಕೆ ಆಗಮಿಸಿ ವೀಕ್ಷಣೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಸರ್ಕಾರ ಶೀಘ್ರ ಜಾರಿಗೆ ತಂದು, ರೈತರ ಪರ ನಿಲ್ಲಬೇಕು. ಸರ್ಕಾರ ಉಚಿತವಾಗಿ ಏನಾದರೂ ಕೊಡಲು ಮುಂದಾದರೇ ಅದನ್ನು ರೈತರಿಗೆ ಕೊಡಲಿ. ಆದರೆ, ಸರ್ಕಾರಗಳು ರೈತರನ್ನು ಮರೆತು ಬೇರೆ ಬೇರೆ ಯೋಜನೆಗಳನ್ನು ತರುತ್ತಿರುವುದು ದೇಶಕ್ಕೆ ದೊಡ್ಡ ಆಪತ್ತು ತರಬಹುದು ಎಂದು ವಿಷಾದ ವ್ಯಕ್ತಪಡಿಸಿದರು.
ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಸರಿಯಾದ ಸಮಯಕ್ಕೆ ಮಳೆ ಆಗುತ್ತಿಲ್ಲ. ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ರೈತರು ಬೆಳೆದ ಬೆಳೆಗೆ ಸರಿಯಾದ ದರ ಸಿಗುತ್ತಿಲ್ಲ. ಪ್ರತಿ ಹಳ್ಳಿಯಲ್ಲೂ ರೈತರು ಕೃಷಿ ಬಿಟ್ಟು ಬೇರೆ ಉದ್ಯೋಗ ಅರಸಿ ಹೋಗುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಸನ್ ರಮೇಶ್ ನಿರ್ಮಿಸಿರುವ ಶ್ರೀಮಂತ ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿಯಾಗಿ ಎರಡನೇ ವಾರ ಪ್ರದರ್ಶನ ಕಾಣುತ್ತಿದೆ. ರೈತರ ಪರವಾದ ಚಿತ್ರ ನಿರ್ಮಿಸಿದ್ದಕ್ಕಾಗಿ ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಪುಷ್ಪಗಿರಿ ಸಾವಯವ ಕೃಷಿಕರ ಬಳಗ, ಪುಷ್ಪಗಿರಿ ಸದಸ್ಯರೆಲ್ಲರೂ ಸೇರಿ ಶ್ರೀಮಂತ ಚಿತ್ರವನ್ನು ವೀಕ್ಷಣೆ ಮಾಡಿದ್ದೇವೆ ಎಂದರು.
ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಹಾಸನ್ ರಮೇಶ್, ಚಲನಚಿತ್ರದ ಮುಖ್ಯ ಪಾತ್ರಧಾರಿ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಕಲ್ಲಹಳ್ಳಿ ಹರೀಶ್ ಇದ್ದರು.