ರೈತರೊಂದಿಗೆ ಪೊಲೀಸರ ಹುತಾತ್ಮ ದಿನ ಇಂದು

NRD_POLICE SMARAK
Published on

ನರಗುಂದ: ಬಂಡಾಯದ ನೆಲ ನರಗುಂದದಲ್ಲಿ ಕರ್ತವ್ಯ ನಿಷ್ಠೆ ಮೆರೆದು ಪ್ರಾಣತ್ಯಾಗ ಮಾಡಿದ ನಾಲ್ವರು ಪೊಲೀಸರ ಸ್ಮರಣಾರ್ಥ ಪಟ್ಟಣದ ಠಾಣೆಯಲ್ಲಿ ಸ್ಮಾರಕ ನಿರ್ವಿುಸಲಾಗಿದ್ದು, ಜು. 21ರಂದು ಸಾಂಕೇತಿಕವಾಗಿ ಲೋಕಾರ್ಪಣೆಗೊಳ್ಳಲಿದೆ.

ಪ್ರತಿವರ್ಷ ಜು. 21ರಂದು ನರಗುಂದ ಮತ್ತು ನವಲಗುಂದದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತದೆ. ಈ ಸಲ ರೈತ ಹುತಾತ್ಮ ದಿನದೊಂದಿಗೆ ಪೊಲೀಸ್ ಹುತಾತ್ಮ ದಿನವನ್ನೂ ಆಚರಿಸಲಾಗುತ್ತಿದೆ.

ತ್ಯಾಗದ ಸ್ಮರಣೆ: 1980ರಲ್ಲಿ ನೀರಿನ ಕರ ವಿರೋಧಿಸಿ ನಡೆದಿದ್ದ ರೈತ ಹೋರಾಟದಲ್ಲಿ ಕರ್ತವ್ಯ ನಿಷ್ಠೆ ಮೆರೆದು ಪ್ರಾಣ ತೆತ್ತಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿಕಂದರ್ ಪಟೇಲ, ಕಾನ್​ಸ್ಟೇಬಲ್​ಗಳಾದ ಬಸಯ್ಯ ಹಿರೇಮಠ, ನಾಗಪ್ಪ ಅಕ್ಕಿ ಮತ್ತು 2007ರಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಲ್ಲಿ ಕೊಚ್ಚಿಹೋದ ಪೇದೆ ನರೇಗಲ್ಲನ ರಾಮಪ್ಪ ಮಲ್ಲಪ್ಪ ಚೌರಿ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಹೀಗಾಗಿ, ನರಗುಂದದ ಉಪವಿಭಾಗ ಠಾಣೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಧ್ರುವರಾಜ ಪಾಟೀಲ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ ಅವರ ಮಾರ್ಗದರ್ಶನದಂತೆ ಕಾನ್​ಸ್ಟೇಬಲ್​ಗಳಾದ ಕಲ್ಲೇಶ ತಿಪ್ಪಾರಡ್ಡಿ, ಎಸ್.ಆರ್. ರಾಯನಗೌಡ್ರ, ಬಿ.ಆರ್. ಸೊರಟೂರ ಹಾಗೂ ಇನ್ನುಳಿದ ಸಿಬ್ಬಂದಿ ಸ್ಮಾರಕಕ್ಕೆ ಶ್ರಮಿಸಿದ್ದಾರೆ. 4 ಲಕ್ಷ ರೂ. ವೆಚ್ಚದ ಗ್ರಾನೈಟ್​ನಲ್ಲಿ ನಿರ್ವಿುಸಿರುವ ಸ್ಮಾರಕವು 24 ಅಡಿ ಉದ್ದ 22 ಅಡಿ ಅಗಲ ಅಳತೆ ಹೊಂದಿದೆ. ಪುರಸಭೆ ಸದಸ್ಯ ರಿಯಾಜ್ ಕೊಣ್ಣೂರ, ಹುಬ್ಬಳ್ಳಿಯ ಮಹ್ಮದ್​ಗೌಸ್, ಮಹ್ಮದ್ ಹಸನ್, ಮಬಾರಕ್ ಅತ್ತಾರ ಎಂಬುವರು ಈ ಸ್ಮಾರಕವನ್ನು ನಿರ್ವಿುಸಿದ್ದಾರೆ.

ಕುಟುಂಬಸ್ಥರ ಮಾಹಿತಿ ಸಂಗ್ರಹ: ರೈತ ಹೋರಾಟದ ವೇಳೆ ಮೃತಪಟ್ಟವರಲ್ಲಿ ನವಲಗುಂದ ತಾಲೂಕಿನ ಶಲವಡಿ ಗ್ರಾಮದ ಬಸಯ್ಯ ಚರಂತಯ್ಯ ಹಿರೇಮಠ ಹಾಗೂ 2007ರಲ್ಲಿ ರಡ್ಡೇರ ನಾಗನೂರ ಗ್ರಾಮದಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ರಾಮಪ್ಪ ಮಲ್ಲಪ್ಪ ಚೌರಿ ಅವರ ಮಾಹಿತಿ ಲಭ್ಯವಾಗಿದೆ. ಇನ್ನುಳಿದ ಇಬ್ಬರು ಹುತಾತ್ಮ ಪೊಲೀಸರ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಿಲ್ಲ. ನರಗುಂದ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಶ್ರಮಿಸುತ್ತಿದ್ದಾರೆ. ಹುತಾತ್ಮ ಪೊಲೀಸರ ಕುಟುಂಬಸ್ಥರನ್ನು ಸಂರ್ಪಸಿ ಅವರನ್ನು ಗೌರವಿಸುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ನಾಲ್ವರು ಪೊಲೀಸರ ಪೈಕಿ ಒಬ್ಬ ಪೊಲೀಸ್ ಕಾನ್​ಸ್ಟೇೕಬಲ್ ಅವಲಂಬಿತರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರೆತಿದೆ. ಉಳಿದವರ ಕುಟುಂಬದವರಿಗೆ ಸರ್ಕಾರದಿಂದ ಯಾವ ಪರಿಹಾರವೂ ಸಿಕ್ಕಿಲ್ಲ.

ಅಂತರ ಕಾಯ್ದುಕೊಳ್ಳಲು ಸೂಚನೆ

ನರಗುಂದ: ಪಟ್ಚಣದಲ್ಲಿ ಜು. 21ರಂದು ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಡಿವೈಎಸ್ಪಿ ಶಿವಾನಂದ ಕಟಗಿ ತಿಳಿಸಿದ್ದಾರೆ. ಕೋವಿಡ್-19 ಸೋಂಕು ಹರಡುತ್ತಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಪೊಲೀಸ್, ಪುರಸಭೆ, ಕಂದಾಯ ಇಲಾಖೆಯಿಂದ ಸಾರ್ವಜನಿಕರು ಅಂತರ ಕಾಪಾಡಿಕೊಳ್ಳಲು ಬಾಕ್ಸ್​ಗಳನ್ನು ಹಾಕಲಾಗಿದೆ. ಯಾವುದೇ ರೈತಪರ, ಕನ್ನಡಪರ, ರಾಜಕೀಯ ಮುಖಂಡರು ಸಾರ್ವಜನಿಕ ಮೆರವಣಿಗೆ, ಬಹಿರಂಗ ಸಭೆ, ಭಾಷಣ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ಸಂಘಟನೆಯಿಂದ 20 ಜನರು ಮಾತ್ರ ಭಾಗವಹಿಸಲು ಸೂಚಿಸಲಾಗಿದೆ. ನರಗುಂದ ಪಟ್ಟಣ ಹಾಗೂ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಬಂದೋಬಸ್ತ್ ಗಾಗಿ 2 ಡಿಎಆರ್, 4 ಪಿಎಸ್​ಐ, ಸಿಪಿಐ, 15 ಜನ ಹೆಡ್ ಕಾನ್ಸ್​ಟೇಬಲ್, 40 ಪೊಲೀಸ್ ಕಾನ್ಸ್​ಟೇಬಲ್​ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net