

ಚಿತ್ರದುರ್ಗ: ಕರ್ನಾಟಕ ಆಯಿಲ್ ಫೆಡರೇಷನ್ ಚಿತ್ರದುರ್ಗ ಒಕ್ಕೂಟದಿಂದ ಸಂಸ್ಥೆಯ ಆವರಣದಲ್ಲಿ ಸೋಮವಾರ ಶ್ರೀಗಂಧದ ಸಸಿಗಳನ್ನು ನೆಡುವ ಮೂಲಕ 35ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಜಿ.ವಿ. ಉದಯಕುಮಾರ್ ಮಾತನಾಡಿ, ನಮ್ಮ ರೈತ ಸಹಕಾರಿ ಸಂಸ್ಥೆ ಸ್ಥಾಪನೆಯಾಗಿ 35 ವಸಂತ ಯಶಸ್ವಿಯಾಗಿ ಪೂರೈಸಿದೆ. ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಎನ್‌ಡಿಡಿಬಿ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸೇವಾಧಾರಿತ ಸಂಸ್ಥೆಯಾಗಿದ್ದು, ಲಾಭಾಧಾರಿತವಲ್ಲ. ಒಕ್ಕೂಟದ ಕಾರ್ಯವ್ಯಾಪ್ತಿಯಲ್ಲಿ ಬರುವ ಎಣ್ಣೆಕಾಳು ಬೆಳೆಯುವ ರೈತರಿಗೆ ಮತ್ತು ಗ್ರಾಹಕರಿಗೆ ಸೇವೆ ಒದಗಿಸುವುದಲ್ಲದೆ, ಸುಮಾರು 200 ಜನರಿಗೆ ಉದ್ಯೋಗ ಒದಗಿಸಿದೆ. ಇದಕ್ಕೆ ಯಾರು ಮಾಲೀಕರಿಲ್ಲ. ಆದರೆ, ರೈತರೆ ಇದರ ಮಾಲೀಕರೆಂದರೆ ತಪ್ಪಾಗದು. ಸಂಸ್ಥೆಯ ಲಾಭವನ್ನು ಡಿವಿಡೆಂಟ್ ರೂಪದಲ್ಲಿ ರೈತರಿಗೆ ವಿತರಿಸುತ್ತೇವೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಡಾ.ಎಂ. ಜಯಕೃಷ್ಣ ಮಾತನಾಡಿ, ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಚಿತ್ರದುರ್ಗ, ತುಮಕೂರು, ದಾವಣಗೆರೆ, ವಿಜಯನಗರ ಹಾಗೂ ಬಳ್ಳಾರಿ ಸೇರಿ 5 ಜಿಲ್ಲೆ, 35 ತಾಲೂಕು, 73 ಪ್ರಾಥಮಿಕ ಸಹಕಾರ ಸಂಘ, 5ಸಾವಿರ ಹಳ್ಳಿಗಳು, ಸುಮಾರು 40ಸಾವಿರ ಎಣ್ಣೆಕಾಳು ಬೆಳೆಯುವ ರೈತ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.
ರೈತರ ಉತ್ಪನ್ನಗಳಾದ ಸಫಲ್, ಸನ್‌ಗೋಲ್ಡ್ ಶ್ರೇಣಿಯ ಖಾದ್ಯ ತೈಲಗಳು ಸೇರಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ರೈತರಿಗೆ ಹಾಗೂ ರೈತ ಸಹಕಾರಿ ಸಂಸ್ಥೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.