ರೈತರು ಹೊಸ ಪ್ರಯೋಗ ನಡೆಸಲಿ

14 vikram 3
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅರಿವು, ಜ್ಞಾನ, ತಿಳಿವಳಿಕೆ ಎಲ್ಲವೂ ಪುಸ್ತಕಗಳಲ್ಲಿ ಮಾತ್ರ ಇಲ್ಲ ಎನ್ನುವ ಸತ್ಯವನ್ನು ಪುಸ್ತಕದ ರೂಪದಲ್ಲೇ ಹೇಳುವ ದುರಂತ ಇಂದು ನಮ್ಮದಾಗಿದೆ. ಮಣ್ಣು ಬರೀ ಒಂದು ಭೌತಿಕ ವಸ್ತುವಲ್ಲ. ಅದೊಂದು ದೊಡ್ಡ ಜೀವ ಸಮುದಾಯ. ಮಳೆ ಮತ್ತು ಮಣ್ಣುಗಳ ನಡುವಿನ ಸಂಬಂಧ ಶಿಕ್ಷಣ ನಮಗೆ ಕಲಿಸುವುದಿಲ್ಲ. ಇದು ಇಂದು ಬದಲಾಗಬೇಕು ಎಂದು ಪರಿಸರ ತಜ್ಞ ಡಾ. ಪ್ರಕಾಶ ಭಟ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ ವತಿಯಿಂದ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಮಣ್ಣು ಕಥನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿ ಸಮಸ್ಯೆಗಳು ಕೃಷಿಯೊಳಗಿಲ್ಲ. ನಮ್ಮ ಇಂದಿನ ಅಭಿವೃದ್ಧಿಯ ಮಾದರಿಯೊಳಗಿದೆ. ನಮ್ಮ ಸಂಶೋಧನೆಗಳು ಪ್ರಯೋಗಾಲಯದಲ್ಲಿ ಮಾತ್ರವಲ್ಲ ಹೊಲ, ತೋಟ, ಗದ್ದೆಗಳಲ್ಲಿ ನಡೆಯಬೇಕು. ಹೊಸ ಪ್ರಯೋಗ, ಪ್ರಯತ್ನಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ದೊಡ್ಡ ರೈತರು ಮಾಡಬೇಕು. ಆ ಜವಾಬ್ದಾರಿ ಅವರ ಮೇಲಿದೆ ಎಂದರು.
ಕೃತಿ ಕುರಿತು ಡಾ. ಚೆನ್ನಪ್ಪ ಅಂಗಡಿ ಮಾತನಾಡಿ, ಕೃಷ್ಣಮೂರ್ತಿ ಬಿಳಿಗೆರೆ ವಿಶಿಷ್ಟ, ಜೀವಪರವಾದ ಭಾಷೆಯಲ್ಲಿ ಪುಸ್ತಕ ಬರೆದಿದ್ದಾರೆ. ಇಂದು ಅತ್ಯಂತ ಆಧುನಿಕ, ವೈಜ್ಞಾನಿಕ ಸಂಶೋಧನೆಗಳ ಪ್ರಕಾರವೂ ಮಣ್ಣು ಎಷ್ಟು ಅದ್ಭುತ ಸಂಗತಿ ಎಂಬುದನ್ನು ಅರಿತು ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.
ಪ್ರಕಾಶಕಿ ಮಂಜುಳಾದೇವಿ ಮಾತನಾಡಿದರು. ಡಾ. ಸಿದ್ಧನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಮೂರ್ತಿ ಬಿಳಿಗೆರೆ ಅವರು ಏಕತಾರಿಯೊಂದಿಗೆ ನೀರುಪದ, ಮಣ್ಣುಪದ ತತ್ವಪದಗಳನ್ನು ಹಾಡಿದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಮಹೇಶ ಹೊರಕೇರಿ, ರಾಜೇಂದ್ರ ಪೋದ್ದಾರ, ಸಿ.ಯು. ಬೆಳ್ಳಕ್ಕಿ, ನಿಂಗಣ್ಣ ಕುಂಟಿ, ಡಾ. ಸಂಗಮನಾಥ ಲೋಕಾಪುರ, ಮಹಾಂತೇಶ ನರೇಗಲ್, ಎಂ.ಎಂ. ಚಿಕ್ಕಮಠ, ಎಫ್.ಬಿ. ಕಣವಿ, ಅಶೋಕ ನಿಡವಣಿ, ಶಂಭಯ್ಯ ಹಿರೇಮಠ, ಡಾ. ಸಂಜೀವ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net