

ಆಲೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ ಎಂದು ತಾಲೂಕು ಪ್ರಭಾರ ತಹಸೀಲ್ದಾರ್ ಎಂ.ಮಮತಾ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡು ಕಂಡ ಧೀಮಂತ ನಾಯಕ ದಿ. ದೇವರಾಜ ಅರಸು ಅವರು. ರೈತಪರ, ಜನಪರ, ಹಿಂದುಳಿದ ವರ್ಗಗಳ ಧ್ವನಿಯಾಗಿದ್ದ ಅರಸು ಅವರು ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಜಾರಿ ಮಾಡಿದ ಹಲವು ಯೋಜನೆಗಳಿಂದಾಗಿ ಶೋಷಿತ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೆತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಗತಿ ಪಥದತ್ತ ಸಾಗಲು ನೆರವಾಗಿದೆ ಎಂದು ಹೇಳಿದರು.
ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಪ್ರಧಾನ ಭಾಷಣ ಮಾಡಿ, ಅರಸು ಅವರ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ನಮಗೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಇಂದು ಕರ್ನಾಟಕದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಘೋಷಣೆಯನ್ನು ಅಕ್ಷರಶಃ ಪಾಲಿಸಿದ ಮುಖ್ಯಮಂತ್ರಿ ದೇವರಾಜ ಅರಸು. ಅನೇಕ ನಾಯಕರನ್ನು ಅವರು ಬೆಳೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರ ಅವರದ್ದು. ಅವರು ಹಾಕಿಕೊಟ್ಟ ಹೆಜ್ಜೆ ಗುರುತುಗಳು ಇನ್ನೂ ಶಾಶ್ವತವಾಗಿ ರಾಜ್ಯ ರಾಜಕೀಯದಲ್ಲಿದೆ. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ, ಬಡ ಹಾಗೂ ಶೋಷಿತ ವರ್ಗದ ಮನೆಗಳಿಗೆ ಉಚಿತ ಭಾಗ್ಯಜ್ಯೋತಿ ಯೋಜನೆ ಹೀಗೆ ನೂರಾರು ಜನಾನುರಾಗಿ ಕಾರ್ಯಕ್ರಮಗಳ ಮುಖೇನ ರಾಜಕೀಯ ಗುರುಗಳಾದ ಸಾಹುಕಾರ ಚೆನ್ನಯ್ಯ ಮತ್ತು ಶಾಂತವೇರಿ ಗೋಪಾಲಗೌಡರ ಸಮಾಜವಾದ ಸಿದ್ಧಾಂತವನ್ನು ಎತ್ತಿಹಿಡಿದು ಕುವೆಂಪು ವಾಣಿಯಂತೆ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಯಾದ ಎ.ಟಿ.ಮಲ್ಲೇಶ್, ಪುರಸಭೆ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಎಸ್‌ಐ ಜಾನಾಬಾಯಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ಕೆ.ಪುಟ್ಟಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಫಾ.ಹೈ.ಗುಲಾಂ ಸತ್ತಾರ್ ಇತರರಿದ್ದರು.