ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿರಿ

9ark-2
ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಿ. ರಾಜೇಶ್ ಮಾತನಾಡಿದರು. ಸ್ವಪ್ನ, ಸುನೀಲ್ ಇತರರು ಇದ್ದರು.
Published on

ಅರಕಲಗೂಡು: ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಿ.ರಾಜೇಶ್ ಸಲಹೆ ನೀಡಿದರು.

ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿಸಿ ಟ್ರಸ್ಟ್ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಪರಿಸರದ ಅಸಮತೋಲನದ ಪರಿಣಾಮ ನಿಗದಿತ ಅವಧಿಗೆ ಮಳೆಯಾಗುತ್ತಿಲ್ಲ. ಅಂತರ್ಜಲ ಕುಸಿತದ ಪರಿಣಾಮ ನೀರಿನ ಕೊರತೆ ಎದುರಾಗುತ್ತಿದೆ. ಹೀಗಾಗಿ ಪಾರಂಪರಿಕವಾಗಿ ಬಳಸುತ್ತಿದ್ದ ಹಾಯಿನೀರು ಪದ್ಧತಿಯಿಂದ ಹೊರಬಂದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಲಭ್ಯವಿರುವ ನೀರನ್ನು ಸಮರ್ಪಕ ಬಳಕೆ ಮಾಡಿಕೊಂಡು ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಹನಿ ನೀರಾವರಿ ಘಟಕ ಅಳವಡಿಕೆಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಎಲ್ಲ ವರ್ಗದ ರೈತರಿಗೆ ಶೇಕಡ 90ರ ಸಹಾಯಧನ ಲಭ್ಯವಿದ್ದು, ರೈತರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.

ಜ್ಞಾನ ವಿಕಾಸ ಯೋಜನೆ ಸಮನ್ವಯ ಅಧಿಕಾರಿ ಸ್ವಪ್ನಾ, ಕೃಷಿ ಮೇಲ್ವಿಚಾರಕ ಎಂ.ಸುನೀಲ್, ಸೇವಾಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು.

ಗಿಡಗಳ ವಿತರಣೆ: ತಾಲೂಕಿನ ಸರಗೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿಸಿ ಟ್ರಸ್ಟ್ ಸಹಯೋಗದಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆ ಕಾರ್ಯಕ್ರಮದಲ್ಲಿ 380 ರೈತರಿಗೆ ಗಿಡ ವಿತರಿಸಲಾಯಿತು. ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ತಿರುಮಲೇಗೌಡ ಗಿಡಗಳ ಪೋಷಣೆ ಮಾಡುವ ಕುರಿತು ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕ ಸುನೀಲ್, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net