ರೈತರು ಹಗಲು ವೇಳೆ 7 ಗಂಟೆ ಕರೆಂಟ್ ಕೊಡಲು ಪ್ರಯತ್ನ: ಇಂಧನ ಸಚಿವ ಕೆ.ಜೆ. ಜಾರ್ಜ್

04_HSN_01
Published on

ಹಾಸನ: ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ ಆಗುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ. ರೈತರು ಹಗಲು ವೇಳೆ 7 ಗಂಟೆ ಕರೆಂಟ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 2500 ಮೆವ್ಯಾ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿಯವರು ಬಂಡವಾಳ ಹೂಡುತ್ತಿದ್ದು, ನಾವು ಅವರಿಂದ ವಿದ್ಯುತ್ ಖರೀದಿ ಮಾಡಿ, ರೈತರು ಸೇರಿ ಎಲ್ಲರಿಗೂ ಪೂರೈಕೆ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಹೊಸದಾಗಿ 400 ಸಬ್ ಸ್ಟೇಷನ್ ಸ್ಥಾಪಿಸಲು ಟೆಂಡರ್ ಆಹ್ವಾನಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಶಾಸಕರು, ತಮ್ಮ ತಮ್ಮ ಕ್ಷೇತ್ರಗಳ ವಿದ್ಯುತ್ ಸಮಸ್ಯೆ, ಸಬ್ ಸ್ಟೇಷನ್ ಬೇಡಿಕೆ, ಕೆಲವು ಅಧಿಕಾರಿಗಳ ಅಸಹಕಾರ ಹಾಗೂ ನಿರ್ಲಕ್ಷ್ಯದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಮಾತನಾಡಿ, ಅಧಿಕಾರಿಗಳು ಕರೆ ಮಾಡಿದರೆ ಫೋನ್ ರಿಸೀವ್ ಮಾಡಲ್ಲ ಎಂದು ಆರೋಪಿಸಿ, ತಮ್ಮ ಕ್ಷೇತ್ರದಲ್ಲೂ ಕರೆಂಟ್ ಸಮಸ್ಯೆ ಇರುವುದನ್ನು ತೆರೆದಿಟ್ಟು, 100 ಪರ್ಸೆಂಟ್ ಅಲ್ಲದಿದ್ದರೂ, ಅಗತ್ಯಕ್ಕೆ ತಕ್ಕಂತೆ ಕರೆಂಟ್ ಕೊಡುವಂತೆ ಮನವಿ ಮಾಡಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಮ್ಮ ಕ್ಷೇತ್ರಕ್ಕೆ ಈಗಾಗಲೇ ಮಂಜೂರಾಗಿರುವ ಸಬ್ ಸ್ಟೇಷನ್ ಕಾಮಗಾರಿ ಬೇಗ ಮುಗಿಸಿ ಕೊಡಬೇಕು. ಹೇಮಾವತಿ ಸಕ್ಕರೆ ಕಾರ್ಖಾನೆ ಬಳಿ ಹೊಸ ಸಬ್ ಸ್ಟೇಷನ್ ಆರಂಭಿಸಬೇಕು. ಇದಕ್ಕಾಗಿ ಆದೇಶ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಇಲಾಖೆ ಎಂಡಿ ಪಂಕಜ್ ಕುಮಾರ್ ಪಾಂಡೆ, ಈ ಸಂಬಂಧ ಪ್ರಸ್ತಾವನೆ ಕಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾಸನ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ಹಿಂದೆಯೇ ನಮ್ಮ ಕ್ಷೇತ್ರಕ್ಕೆ 3 ಉಪ ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿದ್ದವು. ಇನ್ನೂ ಕಾರ್ಯಗತ ಆಗಿಲ್ಲ. ಇದೀಗ ಹಾಸನ ಮಹಾನನಗರ ಪಾಲಿಗೆ ಆಗಿದೆ. ಬಡಾವಣೆಗಳು ಬೆಳೆಯುತ್ತಿವೆ. ಹಾಗಾಗಿ ಸಾಲಗಾಮೆ, ನಿಟ್ಟೂರು, ಅಗಿಲೆ ಸೇರಿದಂತೆ ನಗರದ ಹಿಮ್ಸ್ ಬಳಿಯೂ ಹೆಚ್ಚುವರಿ ಸಬ್ ಸ್ಟೇಷನ್ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿದರು.

ಎಸ್‌ಎಂಕೆ ನಗರದಲ್ಲಿ ಕಳೆದ 7 ವರ್ಷಗಳಿಂದ ವಿದ್ಯುತ್ ಇದೆ. ಇಲ್ಲಿಗೆ ಈಗಲೂ ಶಾಶ್ವತ ವಿದ್ಯುತ್ ಪೂರೈಕೆ ಇಲ್ಲ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಹಲವು ಬಾರಿ ಗಮನ ಸೆಳೆದಿದ್ದರೂ, ಬಗೆಹರಿದಿಲ್ಲ ಎಂದು ಶಾಸಕರು ದೂರಿದರು. ಇದಕ್ಕೆ 66 ಕೆವಿ ಸಾಮರ್ಥ್ಯದ ತಾತ್ಕಾಲಿಕ ಲೈನ್ ಇದೆ ಎಂದು ಅಧಿಕಾರಿಗಳು ಉತ್ತರಿಸಿದಾಗ, ನಾನು ಬಂದು ಶಾಶ್ವತ ಸಂಪರ್ಕ ಕಲ್ಪಿಸಲೇ ಎಂದು ಸಚಿವರು ಗರಂ ಆದರು.

ಇದೇ ವೇಳೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕರೆಂಟ್ ಶಾಕ್‌ನಿಂದ ಇಬ್ಬರು ಮೃತಪಟ್ಟಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಬೇಸರ ಹೊರಹಾಕಿದರು. ಸಾವಿಗೆ ಯಾರು ಕಾರಣ, ದುರಂತ ಆಗುವ ಮುನ್ನ ಏಕೆ ರಿಪೇರಿ ಮಾಡಲಿಲ್ಲ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಸಹ, ಸಬ್‌ಸ್ಟೇಷನ್ ಬೇಡಿಕೆ ಮಂಡಿಸಿ, ನಮ್ಮ ಭಾಗದಲ್ಲಿ ಕಾಡಾನೆ ಸಮಸ್ಯೆಯಿದ್ದು, ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಕಜ್ ಕುಮಾರ್ ಪಾಂಡೆ, ಹನಿಕೆ ಕೇಂದ್ರದ ಕಾಮಗಾರಿಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಬಿಕ್ಕೋಡು ಸ್ಥಳದ ವಿವಾದ ಕೋರ್ಟ್‌ನಲ್ಲಿದೆ. ಸ್ಟೇ ಇದ್ದರೆ ತೆರವು ಮಾಡಿಸಿ ಎಂದರೆ, ಇದಕ್ಕೆ ದನಿಗೂಡಿಸಿದ ಸಚಿವರು, ನಿಮ್ಮಲ್ಲಿ ಕೆಲಸ ಮಾಡುವ ಆಸಕ್ತಿ ಇಲ್ಲ ಎಂದು ಸಿಟ್ಟಾದರು.

ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು, 2 ಸಬ್ ಸ್ಟೇಷನ್ ಕೆಲಸ ಬೇಗ ಮುಗಿಸಿಕೊಡಿ, ಟಿಸಿ ಸಮಸ್ಯೆ ಬಗೆಹರಿಸಿ, ನಮ್ಮ ಕ್ಷೇತ್ರದಲ್ಲಿ 330 ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೇಗಾದರೆ ಮಾಡಿ ಬೆಳಕು ಕೊಡಿಸಿ ಎಂದು ಮನವಿ ಮಾಡಿದರು. ಶೀಘ್ರದಲ್ಲಿಯೇ ಅಗತ್ಯವಿರುವ ವಿದ್ಯುತ್ ಕಂಬಗಳನ್ನು ತರಿಸಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಸಭೆಗೆ ಗೈರಾಗಿದ್ದರು. ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ಶಾಸಕ ಕೆ.ಎ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸ್‌ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಪೂರ್ಣಿಮಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net