

ಶ್ರೀರಂಗಪಟ್ಟಣ: ರೈತರ ಬಲವರ್ಧನೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಮುಖ ಉದ್ದೇಶವಾಗಿದ್ದು, ರೈತರು ಸದೃಢರಾಗದಿದ್ದರೆ ಯಾವುದೇ ಕಾರಣಕ್ಕೂ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಗುರುವಾರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಫಲಾನುಭವಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವರ್ಷದಲ್ಲಿ 3 ಕಂತುಗಳಲ್ಲಿ 2 ಸಾವಿರ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಈವರೆಗೆ ದೇಶದಲ್ಲಿ 12 ಕೋಟಿ ರೈತರಿಗೆ ರೂ.4 ಲಕ್ಷ ಕೋಟಿ ರೂ. ಜಮೆ ಮಾಡಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 1064 ಕುಟುಂಬಗಳು ಈ ಯೋಜನೆಯ ಫಲಾನುಭವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಿಸಾನ್ ಸಮ್ಮಾನ್ ಹಾಗೂ ಫಸಲ್ ಬಿಮಾ ಯೋಜನೆಗಳ ಫಲಾನುಭವಿಗಳಾದ ತಮ್ಮಣ್ಣಗೌಡ ಹಾಗೂ ಜಯರಾಮೇಗೌಡ ಸಂವಾದದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು.
ಉಪವಿಭಾಗಾಧಿಕಾರಿ ನಂದೀಶ್, ಕೃಷಿ ಇಲಾಖೆ ಉಪ ನಿರ್ದೇಶಕರಾದ ಅಶೋಕ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಶಾಂತ್ ಕೀಲಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಗಾಯತ್ರಿ, ಬಿಜೆಪಿ ಮುಖಂಡರಾದ ಆರ್.ಕೆ.ಸಿಂಗ್, ಡಾ.ಸಿದ್ದರಾಮಯ್ಯ, ಟಿ.ಶ್ರೀಧರ್, ದರ್ಶನ್ ಲಿಂಗರಾಜು ಇತರರು ಉಪಸ್ಥಿತರಿದ್ದರು.