

ಮುದ್ದೇಬಿಹಾಳ: ಕೃಷಿ ಆಧಾರಿತ ದ್ರಾಕ್ಷಿ, ದಾಳಿಂಬೆ, ನೀರಾವರಿ ಪೈಪ್‌ಲೈನ್, ಟ್ರಾೃಕ್ಟರ್, ಹೈನುಗಾರಿಕೆ ಚಟುವಟಿಕೆಗಳಿಗೆ ವ್ಯಕ್ತಿಯ ಭದ್ರತೆ ಮತ್ತು ಅರ್ಹತೆ ಆಧರಿಸಿ ಗರಿಷ್ಠ 10ಲಕ್ಷ ರೂ.ಗಳವರೆಗೆ ಅವಧಿ ಸಾಲ ನೀಡಲಾಗುತ್ತದೆ ಎಂದು ವಿಡಿಸಿಸಿ ಬ್ಯಾಂಕ್ ಹಿರಿಯ ಅಧಿಕಾರಿ ಆರ್.ಎಂ. ಬಣಗಾರ ಹೇಳಿದರು.
ಪಟ್ಟಣದ ವಿಡಿಸಿಸಿ ಬ್ಯಾಂಕ್‌ನ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಂಕ್ ಸಿಇಒ ಎಸ್.ಡಿ. ಬಿರಾದಾರ ಮಾತನಾಡಿ, ಕಿಸಾನ್ ಕ್ರೆಡಿಟ್ ಯೋಜನೆಯಡಿ ವಿಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷಗಳವರೆಗೆ ಬೆಳೆಸಾಲ ಸೌಲಭ್ಯ ಒದಗಿಸಲಾಗುವುದು. ಹೆಚ್ಚಿನ ಜಮೀನು ಹೊಂದಿರುವ ದೊಡ್ಡ ಹಿಡುವಳಿದಾರರಿಗೆ ಅವರ ಬೆಳೆ ಆಧರಿಸಿ ಗರಿಷ್ಠ 10ಲಕ್ಷ ರೂ. ಗಳವರೆಗೆ ರೈತಮಿತ್ರ ಯೋಜನೆಯಡಿ ಸಾಲ ನೀಡಲಾಗುತ್ತಿದೆ. ಇಂತಹ ಸಾಲಗಳ ಮೇಲೆ ಮೂರು ಲಕ್ಷಗಳವರೆಗೆ ಶೂನ್ಯ ಬಡ್ಡಿದರ, ಹೆಚ್ಚಿನ ಸಾಲಕ್ಕೆ ಶೇ. 10ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಸಹಕಾರಿ ಬ್ಯಾಂಕ್‌ಗಳಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲವನ್ನು ಕೊಡುವುದಿಲ್ಲ. ಅಲ್ಲದೇ ಬಡ್ಡಿಯ ಮೇಲೆ ಬಡ್ಡಿಯನ್ನು ಆಕರಣೆ ಮಾಡುವುದಿಲ್ಲ. ಜಿಲ್ಲೆಯ ರೈತರು ಈ ಸೌಲಭ್ಯವನ್ನು ಪಡೆಯಬೇಕು ಎಂದರು.
ಬ್ಯಾಂಕ್‌ನ ನಿರ್ದೇಶಕ ಸೋಮನಗೌಡ ಬಿರಾದಾರ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ, ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿದರು. ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಇತರರಿದ್ದರು. ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ ಪಾಟೀಲ ನಿರೂಪಿಸಿದರು.