ರೈತರು ಯೋಜನೆ ಸದುಪಯೋಗಪಡಿಸಿಕೊಳ್ಳಲಿ

19 HBD 1
ಚಿಟಗುಪ್ಪ ತಾಲೂಕಿನ ಚಾಂಗಲೇರಾದ ಪಿಕೆಪಿಎಸ್ ಕಚೇರಿ ಆವರಣದಲ್ಲಿ ಬುಧವಾರ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಪರಮೇಶ್ವರಯ್ಯ ಪಪ್ಪು ಸ್ವಾಮಿ, ಗಾಳೆಪ್ಪ ಪೂಜಾರಿ, ಮಕಬುಲಮಿಯಾ, ವಿಜಯಕುಮಾರ, ಗೋಪಾಲ ರೆಡ್ಡಿ, ಗುರುನಾಥ ರಾಜಗೀರಾ ಇತರರಿದ್ದರು.
Published on

ಚಿಟಗುಪ್ಪ: ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಚಾಂಗಲೇರಾ ಗ್ರಾಮದ ಪಿಕೆಪಿಎಸ್ ಕಚೇರಿ ಆವರಣದಲ್ಲಿ ಬುಧವಾರ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬೆಳೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಕೇಂದ್ರ ಸರ್ಕಾರವು ರೈತರ ಹಿತ ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾದ ತೊಗರಿ ಖರೀದಿ ಕೇಂದ್ರಗಳಿಗೆ ಚಾಲನೆ ನೀಡಿದ್ದು, ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗೆ ಹಣ ಜಮಾ ಮಾಡುವ ಮೂಲಕ ಸರ್ಕಾರ ರೈತರ ನೆರವಿಗೆ ನಿಂತಿದೆ ಎಂದರು.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ೭೫೫೦ ರೂ., ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ೪೫೦ ರೂ.ದೊಂದಿಗೆ ೮೦೦೦ ರೂ.ಗೆ ಪ್ರತಿ ಎಕರೆಗೆ ೪ ಕ್ವಿಂಟಾಲ್​ನಂತೆ ಒಬ್ಬ ರೈತರಿಂದ ೪೦ ಕ್ವಿಂಟಾಲ್​ವರೆಗೆ ತೊಗರಿ ಖರೀದಿಗೆ ಸರ್ಕಾರ ಮುಂದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದರಿಂದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರದಿಂದ ತೊಗರಿ ಖರೀದಿಸಿ ಬೆಂಬಲ ಬೆಲೆ ನೀಡಲಾಗುತ್ತಿದೆ. ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಚಾಂಗಲೇರಾ, ಉಡಬನಳ್ಳಿ, ಮನ್ನಾಎಖೆಳ್ಳಿ, ಬೇಮಳಖೇಡಾ, ಬಗದಲ್, ಮನ್ನಳ್ಳಿ, ಆಣದೂರ, ಸಂಗೊಳಗಿ ಸೇರಿ ೮ ತೊಗರಿ ಖರೀದಿ ಕೇಂದ್ರ ನೀಡಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಾತಾಜಿ ಶ್ರೀ ಮೈತ್ರಾದೇವಿ, ಪಿಕೆಪಿಎಸ್ ಅಧ್ಯಕ್ಷ ಪರಮೇಶ್ವರಯ್ಯ ಪಪ್ಪು ಸ್ವಾಮಿ, ಉಪಾಧ್ಯಕ್ಷ ಗಾಳೆಪ್ಪ ಪೂಜಾರಿ, ಸದಸ್ಯರಾದ ಮಕಬುಲಮಿಯಾ, ವಿಜಯಕುಮಾರ, ಗೋಪಾಲ ರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಮುಖಂಡರಾದ ಶಂಕರಾವ ಪಾಟೀಲ್, ರಾಮಲು ಮಂತ್ರಿ, ದೇವೇಂದ್ರಪ್ಪ, ಶಂಕರಾವ ಪರೀಟ್, ನೂರೋದ್ದಿನ್, ಮಂಜುನಾಥ ಬೇಮಳಖೇಡಾ, ಬಸವರಾಜ ಚಟ್ಟನಳ್ಳಿ, ವೀರಶೆಟ್ಟಿ ಬಸಲಾಪುರ, ಲಾಲಪ್ಪ ಪೋಲಕಪಳ್ಳಿ, ಸೂರ್ಯಕಾಂತ, ಜಗನ್ನಾಥ ಬೇಡರ, ಕರಬಸಯ್ಯಾ ಮಠ, ವಿಶ್ವನಾಥ, ಧನರಾಜ, ಲಕ್ಷ್ಮಣ, ಅಂಬರೀಷ, ಇಂದ್ರಜಿತ, ವಿಶ್ವನಾಥ, ಸಾಗರ, ಪಾಂಡುರಾವ, ನರಸಪ್ಪ ಧನಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net