ರೈತರು ಮಕ್ಕಳನ್ನು ಓದಿಸುತ್ತಿರುವುದು ಸಂತಸ: ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ

Published on

ಶಿಡ್ಲಘಟ್ಟ: ರೈತರಲ್ಲಿ ಮಕ್ಕಳು ಓದಿ ವಿದ್ಯಾವಂತರಾಗಲಿ ಎಂಬ ಮನೋಭಾವ ಬೆಳೆದಿರುವುದು ಸಂತಸ ತಂದಿಗೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ದಿಬ್ಬೂರಹಳ್ಳಿಯ ವೆಂಕಟೇಶ್ವರ ಪ್ರೌಢಶಾಲೆಯನ್ನು ಮಂಗಳವಾರ ಆದಿಚುಂಚನಗಿರಿ ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಮಠದಿಂದ ವಿದ್ಯಾದಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅನ್ನ ತಿಂದದ್ದನ್ನು ಕೊಟ್ಟದ್ದನ್ನು ಮರೆಯಬಹುದು, ಆದರೆ, ಎದೆಯಲ್ಲಿ ಬಿದ್ದ ಅಕ್ಷರ ಉಸಿರು ಇರುವ ತನಕ ಜತೆಯಲ್ಲಿರುತ್ತದೆ. ಲಿಂಗೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಉದ್ದೇಶದಂತೆ ದೇಶದುದ್ದಕ್ಕೂ ಹಾಗೂ ಅಮೆರಿಕದಲ್ಲೂ ಮಠದ ಶಾಲಾ ಕಾಲೇಜುಗಳು, ಹಾಸ್ಟೆಲ್‌ಗಳಿದ್ದು, ವಿದೇಶಗಳಲ್ಲೂ ನಮ್ಮ ಹಳ್ಳಿಯ ಹುಡುಗರು ಓದುತ್ತಿರುವುದು ನಮ್ಮೆಲ್ಲರಿಗೂ ಖುಷಿಯ ವಿಚಾರ ಎಂದರು.

ವೆಂಕಟೇಶ್ವರ ಶಾಲೆಯನ್ನು ಶ್ರೀಮಠದ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರೂ ಎಲ್ಲವೂ ಮಠದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಶಿಸ್ತು, ಶ್ರದ್ಧೆಯಂತೆ ಕೆಲ ನಿಯಮಗಳಲ್ಲಷ್ಟೆ ಬದಲಾವಣೆ ಇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ಸಿಗಲಿದೆ ಎಂದರು.

ಶಾಲೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಮುಖ್ಯಶಿಕ್ಷಕರಿಗೆ ಹಾಗೂ 2022ರ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ದಿಬ್ಬೂರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀಗಳು ಪೂಜೆ ಸಲ್ಲಿಸಿದರು. ಅಲ್ಲಿಂದ ನೂರಾರು ವಿದ್ಯಾರ್ಥಿಗಳು, ಮುತ್ತೈದೆಯರು ಕಲಶ, ಡೋಲು, ವೀರಗಾಸೆಯೊಂದಿಗೆ ಸಾಂಪ್ರದಾಯಿಕ ಕಲಾ ತಂಡಗಳೊಂದಿಗೆ ಶ್ರೀಗಳನ್ನು ಮೆರವಣಿಗೆ ಮೂಲಕ ಕರೆತಂದರು.

ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಶಾಸಕ ವಿ.ಮುನಿಯಪ್ಪ, ಬಿಜಿಎಸ್ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶಿವರಾಮರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ನಿರ್ದೇಶಕರಾದ ಯಲುವಳ್ಳಿ ರಮೇಶ್, ಡಾ.ರಮೇಶ್, ಮೇಲೂರು ಬಿ.ಎನ್.ಸಚಿನ್, ಬಂಕ್ ಮುನಿಯಪ್ಪ, ಡಾ.ಧನಂಜಯರೆಡ್ಡಿ, ವಿಜಯಭಾವರೆಡ್ಡಿ, ಎಬಿಡಿ ಟ್ರಸ್ಟ್ ನ ರಾಜೀವ್‌ಗೌಡ, ಡಿ.ಸಿ.ಗೋಪಿನಾಥ್, ಡಿಎಸ್‌ಎನ್.ರಾಜು ಇದ್ದರು.

50 ಲಕ್ಷ ರೂಪಾಯಿ ನೆರವು: ವೆಂಕಟೇಶ್ವರ ಶಾಲೆಯ ಅಭಿವೃದ್ಧಿ ಮತ್ತು ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟಬಲ್ ಟ್ರಸ್ಟ್‌ನಿಂದ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ಅವರು 50 ಲಕ್ಷ ರೂ. ಡಿಡಿಯನ್ನು ಆದಿಚುಂಚನಗಿರಿ ಶ್ರೀಗಳಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net