

ಗೌರಿಬಿದನೂರು : ರೈತರು ತಾವು ಬೆಳೆದ ಉತ್ಪನ್ನಗಳನ್ನು ಸಂತೆಯಲ್ಲಿ ಮಾರಾಟ ಮಾಡುವಾಗ ತಪ್ಪದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.
ನಗರದಲ್ಲಿ ನಡೆಯುವ ರೈತರ ಸಂತೆಗೆ ಸೋಮವಾರ ಭೇಟಿ ನೀಡಿ ರೈತರು ಮತ್ತು ಗ್ರಾಹಕರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಬೇಕಾಬಿಟ್ಟಿ ನಡೆದುಕೊಳ್ಳಬಾರದು. ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ಸೋಂಕು ನಿವಾರಣೆ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ತೋರಬೇಕು ಎಂದ ಶಾಸಕರು, ನೇರವಾಗಿ ರೈತರೇ ಗ್ರಾಹಕರಿಗೆ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ರೈತರ ಸಂಸ್ಥೆಯ ಮೂಲಕ ರೈತರು ಕಳುಹಿಸಿರುವ ತರಕಾರಿಗಳನ್ನು ಮಾರಾಟಮಾಡಲು ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ನಗರಸಭಾ ಸದಸ್ಯ ಅಮರ್ ಶೆಟ್ಟಿ ಮಾತನಾಡಿ, ಗ್ರಾಹಕರಿಗೆ ಅಗತ್ಯವಿರುವ ದಿನಸಿ ಮತ್ತು ತರಕಾರಿಗಳಿಗೆ ಕೊರತೆಯಾಗದಂತೆ ತಾಲೂಕು ಆಡಳಿತದಿಂದ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಜನ ಆತಂಕ ಪಡಬೇಕಾಗಿಲ್ಲ. ಕರೊನಾ ಸೋಂಕು ನಿವಾರಣೆ ನಿಟ್ಟಿನಲ್ಲಿ ನಗರದ ಜನತೆ ಸಂಪೂರ್ಣ ಸಹಕಾರವನ್ನು ಸರ್ಕಾರಕ್ಕೆ ನೀಡಬೇಕು ಎಂದು ಮನವಿ ಮಾಡಿದರು.