ರೈತರು, ಕನ್ನಡಿಗರ ಎಟಿಎಂ ಜೆಡಿಎಸ್

20
Published on

ಮೈಸೂರು: ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಇಲ್ಲ. ಜೆಡಿಎಸ್ ರೈತರ ಎಟಿಎಂ, ಕನ್ನಡಿಗರ ಎಟಿಎಂ ಆಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಭ್ರಷ್ಟಾಚಾರ ಮತ್ತು ಭ್ರಷ್ಟ ರಾಜಕಾರಣದ ಕುರಿತು ಒಂದು ಉದಾಹರಣೆ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಜೆಡಿಎಸ್ ವಿರುದ್ಧ ಟೀಕಿಸಿರುವ ಅಮಿತ್ ಷಾ ಅವರು ಎಚ್.ಡಿ.ದೇವೇಗೌಡರ ಉಗುರು, ಕಾಲಿನ ಧೂಳಿಗೂ ಸಮವಲ್ಲ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದರು.
ಬಿಜೆಪಿ ಅಂತ್ಯ ಆರಂಭ: ಬಿಜೆಪಿ ಸಮಾಪ್ತಿ ಕರ್ನಾಟಕದಿಂದ ಶುರುವಾಗಿದೆ. ಅವರ ಗುಂಡಿಯನ್ನು ಅವರೇ ತೋಡಿಕೊಂಡಿದ್ದಾರೆ. ದೇವೇಗೌಡರ ವಿರುದ್ಧ ಟೀಕೆ ಮಾಡುವ ಮೂಲಕ ಬಿಜೆಪಿ ಅಂತ್ಯ ಆರಂಭವಾಗಿದೆ ಎಂದು ಕುಟುಕಿದರು.

ಚುನಾವಣಾ ಹೊಂದಾಣಿಕೆಗಾಗಿ ಬಿಜೆಪಿ ಬಳಿ ಹೋದವರು ಯಾರು? ನಾವೇನು ಅರ್ಜಿ ಹಾಕಿದ್ದೇವೆಯೇ? ಬಿಜೆಪಿ, ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟಿದ್ದೇವೆಯೇ? ‘ಜೆಡಿಎಸ್‌ನೊಂದಿಗೆ ಬಿಜೆಪಿಯ ಹೊಂದಾಣಿಕೆ ಇಲ್ಲ’ ಎಂಬ ಮಾತು ಅಮಿತ್ ಷಾ ಅವರಿಂದ ಈಗ ಏಕೆ ಬಂತು? ಅಧಿಕಾರಕ್ಕಾಗಿ ನನ್ನ ಮನೆ ಬಾಗಿಲಿಗೆ ಬಂದವರು ನೀವು, ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ವಾಗ್ದಾಳಿ ನಡೆಸಿದರು.


ಜೆಡಿಎಸ್ ಕುರಿತು ಆತಂಕ ಶುರು: ಜೆಡಿಎಸ್‌ಗೆ ಹಾಕುವ ಮತ ಕಾಂಗ್ರೆಸ್‌ಗೆ ಹಾಕಿದಂತೆ ಮತ್ತು ಅಧಿಕಾರಕ್ಕಾಗಿ ಜೆಡಿಎಸ್ ಬ್ಲಾೃಕ್‌ಮೇಲ್ ಮಾಡುತ್ತದೆ ಎಂಬ ಅಮಿತ್ ಷಾ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ, ಜೆಡಿಎಸ್ ಕುರಿತು ಆತಂಕ ಶುರುವಾಗಿದೆ. ಈ ರೀತಿಯ ಭಯದಿಂದಲೇ ಹೀಗೆ ಹೇಳಿಕೆ ಕೊಟ್ಟಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ಬರಲಿದೆ ಎಂದು ನಾನು ಹೇಳುತ್ತಿಲ್ಲ. ಬಿಜೆಪಿಯವರು ಮಾತನಾಡುತ್ತಿದ್ದಾರೆ. ಇದರ ಬಗ್ಗೆ ಏನು ಹೇಳುತ್ತಿರಿ ಎಂದು ಅಮಿತ್ ಷಾ ಅವರನ್ನು ಪ್ರಶ್ನಿಸಿದರು.

800 ಶಾಸಕರ ಖರೀದಿ:
ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲ ಮೂಲಕ ದೇಶಾದ್ಯಂತ 800 ಶಾಸಕರನ್ನು ಖರೀದಿ ಮಾಡಿದೆ. ಇದು ಇಷ್ಟು ದಿನ ಚುನಾವಣೆ ಬಳಿಕ ನಡೆಯುತ್ತಿತ್ತು. ಇದೀಗ ಚುನಾವಣೆ ಮುನ್ನವೇ ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗಿದೆ. ಆದರೆ, ಕರ್ನಾಟಕದಲ್ಲಿ ಇದು ನಡೆಯಲ್ಲ. ರಾಜ್ಯದಲ್ಲಿ ಬಿಜೆಪಿ ತಿರಸ್ಕಾರಗೊಳ್ಳಲಿದೆ. ಹಳೇ ಮೈಸೂರು ಭಾಗದಲ್ಲಿ ಕಮಲ ಮುದುಡುತ್ತಿದೆ. ಮಂಡ್ಯ, ರಾಮನಗರ ಜಿಲ್ಲೆಗೆ ಬಿಜೆಪಿ ಸರ್ಕಾರದ ಕೊಡುಗೆ ಏನು? ಈ ಕುರಿತು ಸಾರ್ವಜನಿಕ ಚರ್ಚೆಗೆ ನಾನು ಸಿದ್ಧ, ನೀವು ಬರುತ್ತೀರಾ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಬಿಜೆಪಿಯಿಂದ ಲಿಂಗಾಯತರ ದುರ್ಬಳಕೆ:
ವೀರಶೈವ ಲಿಂಗಾಯತ ಸಮಾಜವನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ. ಇದನ್ನು ಈ ಸಮುದಾಯದವರು ಈಗಲಾದರೂ ಅರಿತುಕೊಳ್ಳಬೇಕು ಎಂದು ಎಚ್‌ಡಿಕೆ ಹೇಳಿದರು.
ಬಿ.ಎಸ್.ಯಡಿಯೂರಪ್ಪ ಕಾರಣಕ್ಕೆ ಈ ಸಮಾಜದವರು ಬಿಜೆಪಿಗೆ ಶಕ್ತಿ ತುಂಬಿದರು. ಆದರೆ, ಬಿಎಸ್‌ವೈ ಅವರನ್ನೇ ಮೂಲೆಗುಂಪು ಮಾಡಿದರು. ಅವರು ಸಿಎಂ ಆಗಿದ್ದಾಗ ಕಡೆಗಣಿಸಿದರು. ಅಟಲ್‌ಬಿಹಾರಿ ವಾಜಪೇಯಿ ಕಾಲದಲ್ಲಿ ರಾಜ್ಯ ಬಿಜೆಪಿ ವಿಷಯದಲ್ಲಿ ಮೂಗು ತೂರಿಸುತ್ತಿರಲಿಲ್ಲ. ಆದರೀಗ ಎಲ್ಲದಕ್ಕೂ ಹಸ್ತಕ್ಷೇಪ ಮಾಡಲಾಗುತ್ತಿದೆ. ಬಿಎಸ್‌ವೈ ಬಳಿಕ ಬಸವರಾಜ ಬೊಮ್ಮಾಯಿ ಸಹ ಹೆಸರಿಗೆ ಮಾತ್ರ ಸಿಎಂ. ಅವರಿಗೆ 5 ಸಚಿವರನ್ನು ನೇಮಕ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಕುಟುಕಿದರು.

"ನಂದಿನಿ' ಮಾರಾಟದ ಹುನ್ನಾರ:
ಗುಜರಾತ್‌ನ ಅಮೂಲ್‌ನಲ್ಲಿ ಕೆಎಂಎಫ್ ವಿಲೀನ ಕುರಿತು ಅಮಿತ್ ಷಾ ಹೇಳಿದ ತಕ್ಷಣವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಕೆ ಸ್ಪಷ್ಟನೆ ಕೊಡಲಿಲ್ಲ? ಎರಡು ಸಂಸ್ಥೆಯನ್ನು ಒಂದು ಮಾಡಿ, ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸಂಕ್ರಾಂತಿ ಬಳಿ 2ನೇ ಪಟ್ಟಿ ಬಿಡುಗಡೆ
ಸಂಕ್ರಾಂತಿ ಬಳಿಕ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಜ.5ರಿಂದ ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಪಂಚರತ್ನ ಯಾತ್ರೆ ಕೈಗೊಳ್ಳಲಾಗುವುದು. ಕೋವಿಡ್ ಮಾರ್ಗಸೂಚಿ ಜಾರಿಯಾದರೆ, ಯಾತ್ರೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್‌ಡಿಕೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net