ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿ

29 NMG 04 (2)
Published on

ನಾಗಮಂಗಲ: ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೈತರು ಈ ಬಾರಿ ಬೆಳೆವಿಮೆ ಮಾಡಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.


ತಾಲೂಕಿನ ತಿಟ್ಟನಹೊಸಹಳ್ಳಿ ಗ್ರಾಮದಲ್ಲಿ ಗುರುವಾರ 2023-24ನೇ ಸಾಲಿನ ಬೆಳೆವಿಮೆ ಹಾಗೂ ಬೆಳೆ ಸಮೀಕ್ಷೆ ಕುರಿತಾದ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.


ಈ ಬಾರಿ ಮಂಡ್ಯವೂ ಸೇರಿದಂತೆ ರಾಜ್ಯದ ಮಳೆ ಪ್ರಮಾಣ ನೋಡಿದಾಗ ಶೇ.60 ರಷ್ಟು ಕಡಿಮೆ ಇದೆ. ಮಳೆಯ ಅಭಾವದಿಂದ ರೈತರು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಿರುವ ಕಾರಣ, ಬೆಳೆ ವಿಮೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದು, 900 ಕೋಟಿ ರೂ.ಗಳನ್ನು ಬೆಳೆ ವಿಮೆಗಾಗಿ ರಾಜ್ಯ ಸರ್ಕಾರ ಕಟ್ಟುತ್ತಿದೆ. ಆದರೆ ರೈತರು ಬೆಳೆ ವಿಮೆಗೆ ಕೇವಲ 200 ರೂ. ಕಟ್ಟಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ರೈತರು ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸುವ ಮೂಲಕ ತಮ್ಮ ನಷ್ಟವನ್ನು ವಿಮೆ ಮೂಲಕ ಸರಿದೂಗಿಸಿಕೊಳ್ಳುವಂತೆ ಮನವಿ ಮಾಡಿದರು. ಎಳ್ಳಿಗೆ ವಿಮೆ ಕಟ್ಟಲು ಶುಕ್ರವಾರ ಅಂತಿಮ ದಿನವಾಗಿದ್ದು, ಕೂಡಲೇ ರೈತರು ವಿಮೆ ಮಾಡಿಸುವಂತೆ ಕೋರಿದರು.


ನೇರವಾಗಿ ಯೋಜನೆಗಳನ್ನು ಪಡೆಯಿರಿ: ಸರ್ಕಾರದ ಯಾವುದೇ ಯೋಜನೆಗಳು ಪರಿಪೂರ್ಣವಾಗಿ ಯಶಸ್ವಿಯಾಗಲು ಸಂಬಂಧಪಟ್ಟ ಫಲಾನುಭವಿ ನೇರವಾಗಿ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡಾಗ ಮಾತ್ರ ಸಾಧ್ಯವೇ ಹೊರತು ಮಧ್ಯವರ್ತಿಗಳ ಮೂಲಕ ಯೋಜನೆಗಳನ್ನು ಪಡೆಯುವುದು ಸರಿಯಲ್ಲ. ಮಧ್ಯವರ್ತಿಗಳಿಂದ ಯೋಜನೆಗಳು ಹಳ್ಳಹಿಡಿಯುತ್ತವೆ. ಆದ್ದರಿಂದ ಸರ್ಕಾರದ ಯೋಜನೆಗಳನ್ನು ಪಡೆಯಲು ಯಾವುದೇ ಮಧ್ಯವರ್ತಿಗಳ ಹಂಗಿಲ್ಲದೆ ನೇರವಾಗಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.


ಜಂಟಿ ಕೃಷಿ ನಿರ್ದೇಶಕ ಅಶೋಕ್‌ಕುಮಾರ್, ಉಪಕೃಷಿ ನಿರ್ದೇಶಕಿ ಮಮತಾ, ಸಹಾಯಕ ಕೃಷಿ ನಿರ್ದೇಶಕ ಜಯರಾಮ್, ಎಪಿಎಂಸಿ ನಿರ್ದೇಶಕ ಮಂಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net