

ಮೈಸೂರು: ರೈತರು ಸಮಸ್ಯೆಗಳಿಗೆ ಎದೆಗುಂದದೇ ಮುನ್ನುಗ್ಗಿದರೆ ಯಶಸ್ಸು ಸಾಧ್ಯ. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ಮಾರುಕಟ್ಟೆ ಕಲ್ಪಿಸಿಕೊಂಡರೆ ನಿಶ್ಚಿತವಾಗಿ ಲಾಭ ಸಿಗಲಿದೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ಹದಮಗೆರೆ ಗ್ರಾಮದ ಕೃಷಿಕ ಹಾಗೂ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ರಾಮನಂಜಪ್ಪ ಪ್ರತಿಪಾದಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಂ.1 ಕನ್ನಡದ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ವಾಹಿನಿ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳದ ಎರಡನೇ ದಿನವಾದ ಶನಿವಾರ ‘ಕೃಷಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ’ ವಿಷಯದ ಪ್ರಧಾನ ಗೋಷ್ಠಿಯಲ್ಲಿ ‘ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಮಾರುಕಟ್ಟೆ’ ಕುರಿತು ವಿಷಯ ಮಂಡಿಸಿದರು. ರೈತರು ಬೆಳೆ ಬೆಳೆಯುವುದರಲ್ಲಿ ಸೋಲುತ್ತಿಲ್ಲ. ಆದರೆ ಮಾರಾಟ ಸಂದರ್ಭದಲ್ಲಿ ಸೋಲು ಕಾಣುತ್ತಿದ್ದಾರೆ. ಆದ್ದರಿಂದ ರೈತರು ಸ್ವಾಭಿಮಾನಿಗಳಾಗಿ ತಾವೇ ಮಾರುಕಟ್ಟೆ ಕಂಡುಕೊಳ್ಳುಬೇಕಿದೆ ಎಂದು ಅಭಿಪ್ರಾಯಪಟ್ಟರು.
ನನ್ನ 2.50 ಎಕರೆ ತೋಟದಲ್ಲಿ ಬೆಳೆದಿದ್ದ ಬೆಟ್ಟದ ನೆಲ್ಲಿಕಾಯಿ ಹಾಗೂ ಸಪೋಟವನ್ನು ಬೆಂಗಳೂರಿಗೆ ಕೊಂಡೊಯ್ದು ಮಾರಾಟ ಮಾಡಿದೆ. ಇದರಿಂದ ಲಾಭ ಕಾಣಲು ಸಾಧ್ಯವಾಗಲಿಲ್ಲ. ಆಗ ನನಗೆ ರೈತರ ಅನುಭವಿಸುತ್ತಿರುವ ಕಷ್ಟ ಅರಿವಿಗೆ ಬಂತು. ಕೊನೆಗೆ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡಲು ನಿರ್ಧರಿಸಿದೆ. ಮೊದಲಿಗೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಆಗಿ ಪರಿವರ್ತಿಸಿದೆ. ಅದನ್ನು ಬೆಂಗಳೂರಿನ ನಡೆಯುತ್ತಿದ್ದ ಮೇಳಗಳಲ್ಲಿ ಮಾರುತ್ತಿದೆ. ಆನಂತರ ಅರ್ಧ ಲೀಟರ್ ಹಾಗೂ 1 ಲೀಟರ್ ಬಾಟೆಲ್‌ಗಳನ್ನು ಮಾಡಿ ಹಾಪ್‌ಕಾಮ್ಸ್ ಮೂಲಕ ಹಣ್ಣಿನ ಜ್ಯೂಸ್ ಮಾರಾಟ ಮಾಡಿ ಯಶಸ್ವಿಯಾದೆ. ಬಿಪಿ, ಶುಗರ್ ಇರುವವರಿಗೆ ಇದು ಒಳ್ಳೆಯ ಪೇಯ ಆಗಿರುವ ಕಾರಣ ಹಾಗೂ ಸಾಮಾನ್ಯ ಜನರು ಆರೋಗ್ಯದ ದೃಷ್ಟಿಯಿಂದ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ರೈತರು ಏಕಬೆಳೆಯನ್ನು ನೆಚ್ಚಿಕೊಳ್ಳಬಾರದು. ಸಮಗ್ರ ಬೆಳೆ ಪದ್ಧತಿ ಅನುಸರಿಸಬೇಕು. ಒಂದು ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಕೈಹಿಡಿಯಲಿದೆ. ಹತ್ತಾರು ರೈತರು ಒಟ್ಟುಗೂಡಿ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ನೆರವಿನಿಂದ ಸಂಸ್ಕರಣಾ ಘಟಕಗಳನ್ನು ನಿರ್ಮಿಸಿಕೊಂಡು ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧಿತ ಮಾಡಿದಾಗ ಯಶಸ್ವಿ ರೈತ ಆಗಲು ಸಾಧ್ಯ ಎಂದು ಹೇಳಿದರು.
ಸಿರಿಧಾನ್ಯಕ್ಕೆ ಉತ್ತಮ ಮಾರುಕಟ್ಟೆ: ಐದಾರು ವರ್ಷಗಳ ಶ್ರಮದ ಫಲವಾಗಿ ಚಾಮರಾಜನಗರ ಜಿಲ್ಲೆಯಲ್ಲಿ 500 ಟನ್‌ನಷ್ಟು ಸಿರಿಧಾನ್ಯವನ್ನು ಬೆಳೆದಿದ್ದೇವೆ. ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಮೂಲಕ ಘಟಕಗಳನ್ನು ಸ್ಥಾಪಿಸಿಕೊಂಡು ಮಾರುಕಟ್ಟೆಯನ್ನು ಕಂಡುಕೊಂಡಿದ್ದೇವೆ ಎಂದು ಮಲೆ ಮಹದೇಶ್ವರ ಬೆಟ್ಟದ ಪ್ರಗತಿಪರ ರೈತರ ಕೆ.ವಿ.ಮಾದೇಶ್ ಹೇಳಿದರು.
‘ಸಿರಿಧಾನ್ಯ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ’ ಕುರಿತು ವಿಷಯ ಮಂಡಿಸಿದ ಅವರು, ನಾವು ಇಂದು ರಾಸಾಯನಿಕಯುಕ್ತ ಆಹಾರವನ್ನು ಸೇವಿಸುತ್ತಿದ್ದೇವೆ. ನಮ್ಮ ಪೂರ್ವಜರು ಬಳಸುತ್ತಿದ್ದ ಸಿರಿಧಾನ್ಯಗಳು ಮತ್ತೆ ಮುನ್ನೆಲೆಗೆ ಬಂದಿದೆ. ಇದರ ಬಳಕೆಯಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಕೃಷಿಯಲ್ಲಿ ಯಶಸ್ಸು ಸಾಧಿಸಿದವರನ್ನು ಸನ್ಮಾನಿಸುತ್ತಿದ್ದೇವೆ. ಇದು ಪ್ರೇರಣಾದಾಯಕವೂ ಹೌದು. ಆದರೆ ಕೃಷಿಯಲ್ಲಿ ಸೋತ ರೈತರ ಬಗ್ಗೆ ಗಮನಹರಿಸುತ್ತಿಲ್ಲ. ಅವರನ್ನು ಗುರುತಿಸಿ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಮಾರುಕಟ್ಟೆ ಸೃಷ್ಟಿಸಿಕೊಳ್ಳಿ: ಹುಣಸೂರಿನ ಪ್ರಗತಿಪರ ಕೃಷಿಕ ನವೀನ್ ಮಾತನಾಡಿ, ಸರ್ಕಾರದ ಯೋಜನೆಗಳು ಎಷ್ಟರ ಮಟ್ಟೆಗೆ ರೈತರಿಗೆ ತಲುಪಿವೆ ಎಂಬುದು ಗೊತ್ತಿಲ್ಲ. ಆದರೆ ರೈತರು ತಾಲೂಕುಮಟ್ಟದಲ್ಲೇ ಸಣ್ಣ ಮಾರುಕಟ್ಟೆ ಸೃಷ್ಟಿಸಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಲಾಭ ಕಾಣಬಹುದು ಎಂದರು.
ಕೃಷಿಯಲ್ಲಿ ಕೆಲವನ್ನು ವೇಸ್ಟ್ ಎಂದು ಬಿಸಾಡುತ್ತೇವೆ. ಬಾಳೆಯನ್ನು ಕಟಾವು ಮಾಡಿಕೊಂಡು ಅದರ ದಿಂಡನ್ನು ಬಿಟ್ಟುಬಿಡುತ್ತೇವೆ. ಸುವರ್ಣಗಡ್ಡೆ, ಬಿದಿರು ಕಳಲೆ ಮುಂತಾದ ಕೆಲ ತರಕಾರಿಗಳನ್ನು ಕತ್ತರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಅದು ಹೆಚ್ಚು ಮಾರಾಟವಾಗಲ್ಲ. ಅದೇ ತರಕಾರಿಯನ್ನು ಕತ್ತರಿಸಿ, ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಟ್ಟರೆ, ಅದಕ್ಕೆ ಮೌಲ್ಯವರ್ಧನೆ ಸೃಷ್ಟಿಯಾಗುತ್ತದೆ ಎಂದು ಪ್ರತಿಪಾದಿಸಿದರು.
ಸಮಗ್ರ ಬೆಳೆ ಬೆಳೆಯಿರಿ: ಸಹಜ ಸಮೃದ್ಧಿ ವ್ಯವಸ್ಥಾಪಕ ಮನು ಮಾತನಾಡಿ, 9 ರೀತಿಯ ಸಿರಿಧಾನ್ಯಗಳಿದ್ದು, ಎಲ್ಲರು ಎಲ್ಲವನ್ನೂ ಬಳಸುವುದಿಲ್ಲ. ಹೀಗಾಗಿ ಇದರ ಜತೆಗೆ ಸಮಗ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ರೈತರು ಸಬಲರಾಗಬಹುದು ಎಂದು ಅಭಿಪ್ರಾಯಪಟ್ಟರು.
ನಕಲಿ ಗೊಬ್ಬರ ಮಾರಾಟ ವಿರುದ್ಧ ಕ್ರಮವಾಗಲಿ: ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರ ಶ್ರಮವನ್ನು ಸರ್ಕಾರ, ನಗರವಾಸಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರಿಗೆ ಗೌರವ ಭಾವನೆ ತೋರುತ್ತಿಲ್ಲ ಎಂಬುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದರಿಂದ ರೈತನ ಬದುಕು ಹಸನಾಗುತ್ತದೆ. ಸರ್ಕಾರದ ಸವಲತ್ತು ಬಹುತೇಕ ರೈತರನ್ನು ತಲುಪುತ್ತಿಲ್ಲ. ಅಲ್ಲಿಯೂ ರೈತನಿಗೆ ಅನ್ಯಾಯವಾಗುತ್ತಿದೆ. ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಖರೀದಿಯಲ್ಲಿ ರೈತನಿಗೆ ಮೋಸ ಮಾಡಲಾಗುತ್ತಿದೆ. ಹಲವೆಡೆ ನಕಲಿ ಗೊಬ್ಬರ ಮಾರಾಟವಾಗುತ್ತಿದೆ. ಇದರಿಂದ ರೈತನಿಗೆ ಆಗುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡುವ ಜತೆಗೆ ನಕಲಿ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಒತ್ತಾಯಿಸಿದರು.
ತಿ.ನರಸೀಪುರ ತಾಲೂಕು ವ್ಯಾಪ್ತಿ ಚಿರತೆ ದಾಳಿಯಿಂದ ಒಂದು ತಿಂಗಳಲ್ಲಿ ನಾಲ್ಕು ಸಾವಾಗಿದೆ. ಕಾಡಿನ ಒಳಗೆ ಗಣಿಗಾರಿಕೆ, ರೆಸಾರ್ಟ್‌ಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬರುತ್ತಿವೆ. ಇದಕ್ಕೆ ಸಚಿವರು, ಅಧಿಕಾರಿಗಳೇ ಕಾರಣ ಎಂದು ದೂರಿದರು.