

ತಿ.ನರಸೀಪುರ: ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವುದರ ಮೂಲಕ ಹೆಚ್ಚಿನ ಲಾಭ ಪಡೆಯಬೇಕು ಹಾಗೂ ರೈತರು ಸಹಕಾರ ಸಂಘದ ಮೂಲಕ ವಹಿವಾಟು ಮಾಡಿದರೆ ಸಂಘ ಹಾಗೂ ಹಾಲು ಉತ್ಪಾದಕರು ಉತ್ತಮ ಲಾಭಾಂಶ ಪಡೆಯಬಹುದು ಎಂದು ಮೈಮೂಲ್ ನಿರ್ದೇಶಕ ಆರ್.ಚೆಲುವರಾಜು ಹೇಳಿದರು.
ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಹಾಲು ಮಹಾಮಂಡಲ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅನುದಾನದಲ್ಲಿ ನಿರ್ಮಿಸಲಾಗಿರುವ ಸಂಘದ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ಹೈನೋದ್ಯಮ ಆದಾಯದ ಮೂಲವಾಗಿದ್ದು, ಸಂಘ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು. ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕರಿಗೆ ಹೆಚ್ಚುವರಿಯಾಗಿ ಪ್ರತಿ ಲೀಟರ್‌ಗೆ 3 ರೂ.ಗಳನ್ನು ನೀಡುವುದರ ಮೂಲಕ ಉತ್ಪಾದಕರ ದುಡಿಮೆಗೆ ಫಲ ನೀಡಿದೆ ಎಂದು ತಿಳಿಸಿದರು.
ಮೈಮೂಲ್ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್ ಮಾತನಾಡಿ, ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದಾಗಿದೆ. ಜಿಲ್ಲೆಯ ರೈತರು ಉತ್ಪಾದಿಸುವ ಹಾಲಿನ ಗುಣಮಟ್ಟ ಮತ್ತಷ್ಟು ಸುಧಾರಣೆಯಾಗಬೇಕಿದೆ ಎಂದರು.
ಸಂಘದ ಅಧ್ಯಕ್ಷ ಎನ್.ಆರ್.ಚಂದ್ರಶೇಖರ್, ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಸಿ.ದಿವಾಕರ್, ಜಿಲ್ಲಾ ವಿಸ್ತರಣಾಧಿಕಾರಿ ಆರ್.ಪ್ರಮೋದ್, ನಿರ್ದೇಶಕರಾದ ನಂದೀಶ,ನಟರಾಜಪ್ಪ, ಶಿವಕುಮಾರ್, ಬಸವರಾಜಪ್ಪ, ಚಂದ್ರಶೇಖರಪ್ಪ, ಪುಟ್ಟತಾಯಮ್ಮ, ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಜಯಪ್ಪ, ಶೀಲಾ ನಾಗೇಶ್, ರವಿಪ್ರಸಾದ್, ದುಂಡಪ್ಪ, ಮಹದೇವಸ್ವಾಮಿ, ಡೈರಿ ಗುರುಮೂರ್ತಿ, ಎನ್.ಆರ್.ನಂಜುಂಡಪ್ಪ, ಪುಟ್ಟಮಾದಪ್ಪ, ರಾಜಣ್ಣ,ಪುಟ್ಟಮಾದಪ್ಪ, ಶಿವ ನಂಜಪ್ಪ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ನೇತ್ರ ಇತರರು ಇದ್ದರು.