ರೈತರಿಗೆ ಹೆಸರು ಬೀಜ, ಕೃಷಿ ಸಲಕರಣೆ ಪೂರೈಸಲು ಆಗ್ರಹ

25 NLG 2
Published on

ನವಲಗುಂದ: ನವಲಗುಂದ, ಅಣ್ಣಿಗೇರಿ ತಾಲೂಕುಗಳ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಮುಂಗಾರಿನ ಬಿತ್ತನೆಗೆ ಹೆಸರು ಬೀಜ, ಕೃಷಿ ಸಲಕರಣೆಗಳನ್ನು ಸಮರ್ಪಕವಾಗಿ ಪೂರೈಸುವಂತೆ ಕಾಂಗ್ರೆಸ್ ಯುವ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಹಾಗೂ ಪಕ್ಷದ ಕಾರ್ಯಕರ್ತರು ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರಗೆ ಸೋಮವಾರ ಮನವಿ ಸಲ್ಲಿಸಿದರು.

ಮುಂಗಾರು ಹಂಗಾಮಿನ ಬಿತ್ತನೆಗಾಗಿ ರೈತರು ಹೆಸರು ಬೀಜಗಳನ್ನು ಪಡೆಯಲು ರೈತ ಸಂಪರ್ಕ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಆದರೆ, ರೈತರ ಬೇಡಿಕೆಗೆ ತಕ್ಕಷ್ಟು ದಾಸ್ತಾನು ಮಾಡಿಕೊಂಡಿಲ್ಲ. ನವಲಗುಂದ ಹೆಚ್ಚುವರಿ ರೈತ ಸಂಪರ್ಕ ಕೇಂದ್ರದಲ್ಲಿ ಕೇವಲ 20 ಕ್ವಿಂಟಾಲ್, ಅಣ್ಣಿಗೇರಿಯಲ್ಲಿ 37 ಕ್ವಿಂಟಾಲ್, ಮೊರಬ ರೈತ ಸಂಪರ್ಕ ಕೇಂದ್ರದಲ್ಲಿ 5 ಕ್ವಿಂಟಾಲ್ ಹೆಸರು ಬೀಜ ದಾಸ್ತಾನಿದೆ. ಆದರೆ, ತಾಲೂಕಿಗೆ ಸುಮಾರು 800-1000 ಕ್ವಿಂಟಾಲ್ ಹೆಸರು ಬೀಜಗಳ ಅವಶ್ಯಕತೆ ಇದೆ. ಬೆಂಬಲ ಬೆಲೆ ಕಡಲೆ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಮೇ 20ಕ್ಕೆ ಕೊನೆಗೊಂಡಿದೆ. ಆದರೆ, ಈಗಾಗಲೇ ಕಡಲೆ ಕೊಟ್ಟ ರೈತರ ಖಾತೆಗೆ ಹಣ ಜಮೆ ಮಾಡಿಲ್ಲ. ಈ ಕುರಿತು ಏ. 30ರಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದರೂ ರೈತರಿಗೆ ನ್ಯಾಯ ಸಿಕ್ಕಿಲ್ಲ. ಕರೊನಾದಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ಹಾಗೂ ಸೌಲಭ್ಯ ವಂಚಿತ ಸಾಮಾನ್ಯ ರೈತರಿಗೆ ಸರ್ಕಾರ ಸಹಾಯಧನದಲ್ಲಿ ಬಿತ್ತನೆ ಬೀಜ, ಕೃಷಿ ಉಪಕರಣಗಳನ್ನು ಪೂರೈಸಬೇಕು. ಕಡಲೆ ಕೊಟ್ಟ ರೈತರಿಗೆ ವಾರದೊಳಗೆ ಹಣ ಸಂದಾಯ ಮಾಡಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ವಿನೋದ ಅಸೂಟಿ ಹೇಳಿದರು.

ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ಹಿರೇಗೌಡ್ರ, ಮೌನೇಶ ರೇವಣ್ಣವರ, ನಿಂಗನಗೌಡ ಪಾಟೀಲ, ಬಸವರಡ್ಡಿ ಇಬ್ರಾಹಿಂಪೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net