ರೈತರಿಗೆ ಹುಳಿಯಾದ ದ್ರಾಕ್ಷಿ ಬೆಳೆ

18-11
ತೆಲಸಂಗ ಗ್ರಾಮದಲ್ಲಿ ಚಾಟ್ನಿ ಮಾಡಿರುವ ದ್ರಾಕ್ಷಿ ಗಿಡಗಳಿಗೆ ಔಷಧ ಲೇಪಿಸುತ್ತಿರುವುದು.
Published on

ತೆಲಸಂಗ/ಕಕಮರಿ, ಬೆಳಗಾವಿ: ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ದ್ರಾಕ್ಷಿಗೆ ದೌನಿ, ಬೂದಿ, ಗೊನೆ ಕೊಳೆ ರೋಗದ ಭಯ ಎದುರಾಗಿದೆ.

ದ್ರಾಕ್ಷಿ ಬೆಳೆಯುವುದರಲ್ಲಿ ರಾಜ್ಯಕ್ಕೆ 2ನೇ ಸ್ಥಾನದಲ್ಲಿರುವ ಅಥಣಿ ತಾಲೂಕಿನಲ್ಲಿ ದ್ರಾಕ್ಷಿ ಚಾಟ್ನಿ ಮಾಡುವ ಹಂತಕ್ಕೆ ಬಂದಿದ್ದು, ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಅಥಣಿ ತಾಲೂಕಿನಲ್ಲಿ ಅಂದಾಜು 23 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಸತತ ಮಳೆ ಬೀಳುವ ಮೊದಲೇ ಚಾಟ್ನಿ ಮಾಡಿದ ತೋಟಗಳಲ್ಲಿ ಈಗಾಗಲೇ ಗಿಡದಲ್ಲಿ ಹೂವು ಮೂಡಿ, ಕಾಯಿ ಕಟ್ಟುವ ಹಂತದಲ್ಲಿವೆ. ಆದರೆ, ಮಳೆಯಿಂದ ಹೂವು ಕೊಳೆಯುವ ಆತಂಕ ರೈತರಿಗೆ ಎದುರಾಗಿದೆ.

ಕರೊನಾ ಸಂದರ್ಭದಲ್ಲಿ ಕಟಾವು ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ಬಳಲಿದ್ದ ರೈತರಿಗೆ, ದ್ರಾಕ್ಷಿ ಬೆಳೆಗೆ ಸರಿಯಾದ ಬೆಲೆ ಇಲ್ಲದ ಕಾರಣ, ದ್ರಾಕ್ಷಿಯನ್ನು ಇನ್ನೂ ಕೋಲ್ಡ್ ಸ್ಟೋರೇಜ್‌ನಲ್ಲಿರಿಸಲಾಗಿದೆ. ಈ ಬಾರಿ ಹವಾಮಾನ ವೈಪರೀತ್ಯ ರೈತರ ತಲೆ ಬಿಸಿ ಮಾಡಿದೆ. ದ್ರಾಕ್ಷಿಗೆ ಅಕ್ಟೋಬರ್ ತಿಂಗಳು ನಿರ್ಣಾಯಕವಾಗಿದ್ದು, ಇದೇ ತಿಂಗಳಲ್ಲಿ ಸತತ ಮಳೆಯಿಂದ ರೋಗ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net