ರೈತರಿಗೆ ಸ್ಪಂದಿಸುವ ಜಾತ್ಯತೀತ ಪಕ್ಷ, ಅಭ್ಯರ್ಥಿಗಳಿಗೆ ಬೆಂಬಲ: ಬಡಗಲಪುರ ನಾಗೇಂದ್ರ

23
Published on

ಮೈಸೂರು: ವಿಧಾನಸಭೆ ಚುನಾವಣೆಗೆ ಕರ್ನಾಟಕ ರಾಜ್ಯ ರೈತ ಸಂಘದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ರೈತ ಪ್ರಣಾಳಿಕೆ ಬಿಡುಗಡೆಗೊಳಿಸಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಈ ಬಾರಿಯ ಚುನಾವಣೆಯಲ್ಲಿ ರೈತರಿಗೆ ಸ್ಪಂದಿಸುವ ಜಾತ್ಯತೀತ ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಬೆಂಬಲ ನೀಡಲಾಗುವುದು ಎಂದು ಘೋಷಿಸಿದರು.
ನಮ್ಮ ಪಕ್ಷದ ಅಭ್ಯರ್ಥಿಗಳು ಇರುವ ಕಡೆಗಳಲ್ಲಿ ಎಲ್ಲರೊಂದಿಗೂ ಪೈಪೋಟಿ ನಡೆಸಲಾಗುವುದು. ಅಭ್ಯರ್ಥಿಗಳು ಇಲ್ಲದ ಕಡೆ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿ ಸೋಲಿಸಬೇಕೆಂದು ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಅಧಿಕಾರಕ್ಕೆ ಬರುವ ಸರ್ಕಾರವನ್ನು ಒತ್ತಾಯಿಸಲು ರೈತ ಸಂಘದಿಂದ ಹಕ್ಕೊತ್ತಾಯದ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಕರ್ನಾಟಕದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿಗೆ ಸಮಗ್ರ ಪರಿಹಾರ ಕಂಡುಹಿಡಿದು ರೈತರಿಗೆ ತೃಪ್ತಿಕರ ಆದಾಯ ಭದ್ರತೆ ಒದಗಿಸುವುದು, ಯುವ ರೈತರು, ವಿದ್ಯಾವಂತರು ಕೃಷಿಯಲ್ಲಿ ತೊಡಗಿ ಗೌರವಯುತ ಜೀವನ ನಡೆಸಲು ಕೃಷಿಗೆ ಔದ್ಯಮಿಕ ಸ್ಥಾನ ಪಡೆಯುವುದು ಸೇರಿದಂತೆ ಅಗತ್ಯ ವಾತಾವರಣ ನಿರ್ಮಿಸುವುದು ನಮ್ಮ ಉದ್ದೇಶ ಎಂದರು.
ರೈತರ ಉತ್ಪನ್ನಗಳಿಗೆ ಲಾಭದಾಯಕ ಧಾರಣೆ ಒದಗಿಸಲು ಕನಿಷ್ಠ ಬೆಂಬಲ ಬೆಲೆಗೆ ಸಂವಿಧಾನಾತ್ಮಕ ಚೌಕಟ್ಟಿನ ಮೂಲಕ ಕಾನೂನಿನ ರಕ್ಷಣೆ ನೀಡುವುದು ರೈತ ಪ್ರಣಾಳಿಕೆಯಲ್ಲಿ ಸೇರಿದೆ. ಅಲ್ಲದೆ, ದೇಶದ ಆಹಾರ ಭದ್ರತೆಯನ್ನು ಸದೃಢ ಮಾಡಿ, ಹಸಿವು ಮತ್ತು ಅಪೌಷ್ಟಿಕತೆ ದೂರ ಮಾಡಿ ಎಲ್ಲರಿಗೂ ವಿಷಮುಕ್ತ ಆಹಾರ, ಹಾಲು, ಹಣ್ಣು ತರಕಾರಿ ಒದಗಿಸುತ್ತೇವೆ. ನೈಸರ್ಗಿಕ ಸಂಪನ್ಮೂಲ, ಜೀವ ವೈವಿಧ್ಯತೆಗಳನ್ನು ಸಂರಕ್ಷಿಸಿ, ತಾಪಮಾನ ವೈಪರೀತ್ಯಕ್ಕೆ ದಾರಿ ಮಾಡಿಕೊಡದ ರೀತಿಯಲ್ಲಿ ಪರಿಸರ ಸ್ನೇಹಿ, ಸುಸ್ಥಿರ ಕೃಷಿ ಪದ್ಧತಿ ಕೈಗೊಳ್ಳುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಉತ್ಪಾದನೆಯಿಂದ ಮಾರುಕಟ್ಟೆವರೆಗೆ ಕೃಷಿಕರು ಒಗ್ಗೂಡಿ ಸಾಂಘಿಕ ಪ್ರಯತ್ನ ನಡೆಸುವ ರೀತಿಯಲ್ಲಿ ಸೂಕ್ತ ವಾತಾವರಣ ರೂಪಿಸಬೇಕಿದೆ. ರೈತ ವಿರೋಧಿ ಕಾಯ್ದೆ, ಕಾನೂನು ಜಾರಿಗೆ ಬರಬಾರದು. ರೈತಕುಲಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಮಾರಕವಾಗಿರುವ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆದು ಉಳುವವನೇ ಭೂಮಿ ಒಡೆಯನಾಗಿ ಉಳಿಯುವ ಸುಧಾರಣೆಗಳನ್ನು ರೂಪಿಸಬೇಕು ಎಂದರು.
ಕಾರ್ಪೋರೇಟ್ ಧಣಿಗಳ ಪರವಾಗಿ ನಮ್ಮ ಎಪಿಎಂಸಿ ವ್ಯವಸ್ಥೆಗೆ ತಂದಿರುವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿ ರೈತಸ್ನೇಹಿ ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೆ ತರಬೇಕು. ಹಾಗೆಯೆ, ರೈತ ವಿರೋಧಿ ಆಗಿರುವ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎನ್ನುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಪ್ರಣಾಳಿಕೆಯಲ್ಲಿ ಮಾಡಲಾಗಿದೆ ಎಂದು ವಿವರಿಸಿದರು.
ಮುಖಂಡರಾದ ಹೊಸಕೋಟೆ ಬಸವರಾಜು, ನೇತ್ರಾವತಿ, ಹೊಸೂರು ಕುಮಾರ್, ಮಂಡಕಳ್ಳಿ ಮಹೇಶ್, ಪಿ.ಮರಂಕಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net