ರೈತರಿಗೆ ಸವಾಲಾದ ಬೆಳೆ ರಕ್ಷಣೆ

7 Budikote 2 Goni chila haagu tantigalinda beli
Published on

ಬೂದಿಕೋಟೆ: ಗಡಿಭಾಗದ ಗ್ರಾಮದಲ್ಲಿ ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡುವುದು ರೈತರಿಗೆ ದೊಡ್ಡ ಸವಾಲಾಗಿದ್ದು, ಕಾಡಾನೆಗಳ ಭಯದಲ್ಲಿ ಅನ್ನದಾತ ಜಮೀನಿನಲ್ಲಿ ಬೇಲಿ ನಿರ್ಮಿಸಿಕೊಂಡು ಹಗಲಿರುಳು ಕಾವಲು ಕಾಯುವಂತಾಗಿದೆ.

ಕೋಲಾರ ಜಿಲ್ಲೆಯ ಗಡಿಭಾಗದ ರೈತರು ರುವ ಅಲ್ಪಸ್ವಲ್ಪ ನೀರು ಬಳಸಿ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶ ಮಾಡುತ್ತಿವೆ. ಬಂಗಾರಪೇಟೆ ತಾಲೂಕು ಬೂದಿಕೋಟೆ ಹಾಗೂ ಕಾಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದ್ದು, ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಜನರು ಕಾಡು ಪ್ರಾಣಿಗಳ ಕಾಟದಿಂದ ಹೈರಾಣಾಗಿದ್ದಾರೆ. ಪ್ರತಿವರ್ಷ ಕಾಡಾನೆಗಳು ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುವ ಜತೆಗೆ ರೈತರನ್ನು ಬಲಿ ತೆಗೆದುಕೊಳ್ಳುತ್ತಿವೆ.

ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ವ್ಯವಸಾಯವನ್ನೇ ನಂಬಿರುವ ಬೂದಿಕೋಟೆ ಹೋಬಳಿಯ ಗಡಿಭಾಗದ ಡಿ.ಪಿ.ಹಳ್ಳಿ, ಕೊಳಮೂರು, ಚತ್ತಗುಟ್ಟಹಳ್ಳಿ, ದಿನ್ನೂರು, ಮೂತನೂರು ಸೇರಿ ಇತರ ಗ್ರಾಮಗಳ ರೈತರು ಮಳೆಯಾಶ್ರಿತ ಬೆಳೆಗಳಾದ ನೆಲಗಡಲೆ ರಾಗಿ, ತೊಗರಿ ಇತ್ಯಾದಿ ಬೆಳೆ ಬೆಳೆದಿದ್ದಾರೆ. ಬೆಳೆಗಳು ಸಹ ಉತ್ತಮವಾಗಿ ಬಂದಿದ್ದು, ಕಾಡು ಪ್ರಾಣಿಗಳಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಕಾವಲಿಗೆ ಆನೆ ಭಯ: ಈ ಹಿಂದೆ ರೈತರು ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ರಾತ್ರಿ ಸಮಯ ಕಾವಲಿದ್ದು ಬೆಳೆಗಳನ್ನು ಕಾಡು ಪ್ರಾಣಿಗಳಿಂದ ಕಾಪಾಡಿಕೊಳ್ಳುತ್ತಿದ್ದರು. ಆದರೆ ಈಗ ಕಾಡಾನೆ ಬೀಡುಬಿಟ್ಟು ಸಾಕಷ್ಟು ರೈತರನ್ನು ಬಲಿ ತೆಗೆದುಕೊಳ್ಳುತ್ತಿರುವ ಕಾರಣ ಪ್ರಾಣ ಭಯದಿಂದ ರಾತ್ರಿ ಕಾವಲು ಕಾಯುವುದನ್ನೇ ನಿಲ್ಲಿಸಿದ್ದಾರೆ. ಇದರಿಂದ ಬೆಳೆದ ಬೆಳೆ ಮನೆ ಸೇರುವ ಮುಂಚೆಯೇ ನಾಶವಾಗುತ್ತಿದೆ.

ನಷ್ಟ ಪರಿಹಾರವಿಲ್ಲ: ಕಾಡಾನೆಗಳಿಂದ ಬೆಳೆ ನಷ್ಟವಾಗಿ ರೈತರಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದರೂ ಸರ್ಕಾರ ಸರಿಯಾಗಿ ನಷ್ಟ ಪರಿಹಾರ ವಿತರಿಸುತ್ತಿಲ್ಲ. ಮಾಡಿದರೂ 1000 ಅಥವಾ 2000 ರೂ. ನೀಡಿ ರೈತರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಅರಣ್ಯ ಇಲಾಖೆಯವರು ಕಾಡಾನೆ ನಿಯಂತ್ರಿಸಿದರೆ ಇತರ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಬಹುದು ಎಂಬುದು ರೈತರ ಅಭಿಪ್ರಾಯ.

ಆನೆ ಭಯಕ್ಕೆ ರೈತರು ಸಂಜೆ 6ರ ನಂತರ ಜಮೀನಿನ ಕಡೆ ಹೋಗುತ್ತಿಲ್ಲ. ಇದರಿಂದ ಕಾಡುಪ್ರಾಣಿಗಳಿಂದ ಬೆಳೆ ಕಾಪಾಡುವುದು ಕಷ್ಟ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಶಾಶ್ವತವಾಗಿ ನಿಯಂತ್ರಿಸಿದರೆ ರಾತ್ರಿ ಕಾವಲಿದ್ದು, ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳುತ್ತೇವೆ. ಬೆಳೆ ನಾಶಕ್ಕೆ ಇಲಾಖೆಯಿಂದ ನೀಡುವ ಪರಿಹಾರದ ಮೊತ್ತ ಹೆಚ್ಚಿಸಬೇಕು. ಶಂಕರಪ್ಪ, ರೈತ, ಡಿ.ಪಿ.ಹಳ್ಳಿ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net