

ಗುಂಡ್ಲುಪೇಟೆ: ಸರ್ಕಾರವು ಹಿಂದಿನಂತೆಯೇ ರೈತರಿಗೆ ದೊರಕಬೇಕಾದ ಎಲ್ಲ ಸವಲತ್ತುಗಳನ್ನು ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ಜಿಲ್ಲಾಧ್ಯಕ್ಷ ಸಿ.ಶಿವಪ್ರಕಾಶ್ ಒತ್ತಾಯಿಸಿದರು.
ಪಟ್ಟಣದ ವನವಾಸಿ ಕಲ್ಯಾಣ ಕೇಂದ್ರದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಘಟಕದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಜಮೀನುಗಳಲ್ಲಿ ಹುಲಿ, ಚಿರತೆ ಹಾವಳಿ ಹೆಚ್ಚಿದೆ. ತಾಲೂಕಿನ ಕೊಡಸೋಗೆ, ಕರಕಲಮಾದಹಳ್ಳಿ, ವಡ್ಡಗೆರೆ, ಕಡತಾಳಕಟ್ಟೆಹುಂಡಿ, ಮಾಲಾಪುರ, ಬಾಚಹಳ್ಳಿ, ಹುಂಡೀಪುರ, ಗೋಪಾಲಪುರ, ಶಿಂಡನಪುರ, ಕಂದೇಗಾಲ, ಮಂಚಹಳ್ಳಿ, ದೇಶಿಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರತಿ ದಿನವೂ ಹುಲಿ ಮತ್ತು ಚಿರತೆ ದಾಳಿ ಮಾಡಿ ಜಾನುವಾರುಗಳನ್ನು ಕೊಲ್ಲುತ್ತಿವೆ. ಘಟನೆ ನಡೆದ ಬಗ್ಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆ ಅಧಿಕಾರಿ ಸ್ಥಳ ಮಹಜರು ನಡೆಸಿ ಪರಿಹಾರದ ಭರವಸೆ ನೀಡಿ ತೆರಳುತ್ತಾರೆ. ಆರು ತಿಂಗಳಾದರೂ ಪರಿಹಾರ ನೀಡುತ್ತಿಲ್ಲ. ಹಿಂದೆ ಅಕ್ರಮ ಸಕ್ರಮ ಯೋಜನೆಯಲ್ಲಿ 30 ಸಾವಿರ ರೂ. ಕಟ್ಟಿದರೆ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಆದರೆ ಈಗ 3 ಲಕ್ಷ ರೂ. ವೆಚ್ಚವಾಗುತ್ತಿದೆ. ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದ್ದರೂ ಡೇರಿಗಳಲ್ಲಿ ಕಡಿಮೆ ಸಹಾಯಧನ ಕೊಡಲಾಗುತ್ತಿದೆ. ಕೃಷಿ ಸಮ್ಮಾನ್ ಯೋಜನೆಯ 4 ಸಾವಿರ ರೂ., ವಿದ್ಯಾನಿಧಿ, ಡೀಸೆಲ್ ಸಬ್ಸಿಡಿ, ಹಾಲಿನ ಪ್ರೋತ್ಸಾಹಧನ ಸ್ಥಗಿತ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಸರ್ಕಾರ ಇನ್ನಾದರೂ ಹಿಂದಿನಂತೆಯೇ ರೈತರಿಗೆ ಎಲ್ಲ ಸವಲತ್ತುಗಳನ್ನು ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಕೆ.ಎಲ್.ಮಹದೇವಸ್ವಾಮಿ, ಪದಾಧಿಕಾರಿಗಳಾದ ಶಶಿಕುಮಾರ್, ಶಾಂತಪ್ಪ, ಪ್ರಕಾಶ್, ಎ.ಎಂ.ವೀರಭದ್ರಪ್ಪ, ಜಯಣ್ಣ ಸೇರಿದಂತೆ ಹಲವರು ಇದ್ದರು.