

ಹುಲಸೂರು: ನಮ್ಮ ಭಾಗದಲ್ಲಿ ಸಮರ್ಪಕ ಮಳೆ ಇಲ್ಲದೆ ರೈತರು ಆತಂಕದಲ್ಲಿದ್ದಾರೆ. ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕೃಷಿ ಅಧಿಕಾರಿಗಳು ಬಿತ್ತನೆಗೆ ಬೇಕಾಗುವ ಕಡಲೆ, ಗೋಧಿ, ಕುಸುಬಿ ಮತ್ತು ಬಿಳಿ ಜೋಳದ ಬೀಜಗಳು ಸಮರ್ಪಕವಾಗಿ ವಿತರಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭುಸಾರೆ ಹೇಳಿದ್ದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಹಿಂಗಾರು ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ತಾಲೂಕು ಕೇಂದ್ರ ಹುಲಸೂರು ಒಂದೇ ಸ್ಥಳದಲ್ಲಿ ಬೀಜ ವಿತರಿಸುತ್ತಿದ್ದು, ಬೇರೆ ಗ್ರಾಮಗಳಲ್ಲೂ ವಿತರಣಾ ಕೇಂದ್ರ ಪ್ರಾರಂಭಿಸಬೇಕು. ಕೇಂದ್ರಗಳು ಹೆಚ್ಚು ಪ್ರಾರಂಭಿಸುವುದರಿAದ ರೈತರಿಗೆ ಬೇಗನೆ ಬೀಜ ದೊರೆಯುತ್ತವೆ. ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ, ಕುಸುಬೆ ಮತ್ತು ಗೋಧಿ ಬೀಜಗಳು ವಿತರಿಸಲಾಗುತ್ತಿದೆ. ರೈತರು ಸಂಕೋಚವಿಲ್ಲದೆ ಬೀಜ ತೆಗೆದುಕೊಂಡು ಹೋಗಬೇಕು. ರೈತ ಸಂಪರ್ಕ ಕೇಂದ್ರ ಬೀದರ್- ಲಾತೂರ ಮುಖ್ಯ ರಸ್ತೆಯ ತೋರಿ ಬಸವಣ್ಣ ದೇವಸ್ಥಾನದ ಕ್ರಾಸ್ ಹತ್ತಿರ ಖಾಸಗಿ ಕಟ್ಟಡದ ಸಹಾಯ ಪಡೆದು ಕೃಷಿ ಇಲಾಖೆ ಕೆಲಸ ಮಾಡುತ್ತಿದ್ದಾರೆ. ಹಳೇ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಿಸುತ್ತಿದ್ದು, ರೈತರಿಗೆ ಸ್ಥಳದ ಬಗ್ಗೆ ತಿಳುವಳಿಕೆ ಹೇಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಅಧಿಕಾರಿ ಶ್ರೀಕಾಂತ ತಾಂಬೋಳೆ ಮಾತನಾಡಿ, ಹುಲಸೂರು ಕೇಂದ್ರದಲ್ಲಿ ಕಡಲೆ ೫೦೦ ಕ್ವಿಂಟಾಲ್, ಗೋಧಿ ೯ ಕ್ವಿಂಟಾಲ್, ಕುಸಬಿ ಬೀಜ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಮತ್ತೆ ಬೀಜ ತರಿಸಿಕೊಡುತ್ತೇವೆ. ರೈತರು ಆತಂಕವಿಲ್ಲದೆ, ಆತುರ ಮಾಡದೆ ಬಿತ್ತನೆ ಬೀಜ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಪ್ರಮುಖರಾದ ರಜನಿ ಕುರೆ, ದತ್ತು ಕಾಕನಾಳೆ, ಕಿಶನ್ ರಾಠೋಡ, ದಯಾಸಾಗರ ಮಡಿವಾಳ, ವೈಜನಾಥ ಮೇತ್ರೆ, ಗುಂಡಪ್ಪ ಇತರರಿದ್ದರು.