

ಇಂಡಿ: ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಲ್ಲಿಸುವ ಸೇವೆ ಸಮಾಜದಲ್ಲಿ ಗೌರವ ಹೆಚ್ಚಿಸುವ ಜತೆಗೆ ನೆಮ್ಮದಿ ಜೀವನಕ್ಕೆ ದಾರಿಯಾಗುತ್ತದೆ. ತಾಲೂಕಿನ ನೀರಾವರಿ ಯೋಜನೆಗಳಿಗೆ ಸದ್ಬಳಕೆ ಮಾಡಿಕೊಳ್ಳಿ ಎಂದು ವಯೋ ನಿವೃತ್ತಿ ಹೊಂದಿದ ದಿನವೇ ತಮ್ಮ 38 ದಿನಗಳ ವೇತನ 49,667 ರೂ.ಗಳ ಚೆಕ್ ನೀಡಿದ್ದು, ರಾಜಶೇಖರ ಮೇತ್ರಿ ಅವರ ಸಾಮಾಜಿಕ ಕಳಕಳಿಯನ್ನು ತೋರುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಭಾನುವಾರ ಪಟ್ಟಣದ ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ರೇಷ್ಮೆ ಇಲಾಖೆ ನೌಕರರ ಸಂಘ ಹಾಗೂ ಹಟಗಾರ (ನೇಕಾರ) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ರಾಜಶೇಖರ ಮೇತ್ರಿ ಅವರ ವಯೋನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಮೇತ್ರಿ ಅವರು ಸರಳತೆ ಹಾಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದರು. ಮಾತಿಗಿಂತ ಕೃತಿ ಲೇಸು ಎನ್ನುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು. ರೈತರಿಗೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಸೇವೆಯಿಂದ ನಿವೃತ್ತಿ ಹೊಂದಿದ ಮೇತ್ರಿ ಅವರು ರೇಷ್ಮೆ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಒಂದು ಕಪ್ಪು ಚುಕ್ಕೆಯೂ ಬರದಂತೆ ನೌಕರಿ ಮಾಡಿದ್ದು ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಶೇಖರ ಮೇತ್ರಿ, ಮೇಲಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಇಲಾಖೆಯಿಂದ ಸಾವಿರಾರು ಜನ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟ ತೃಪ್ತಿ ನನಗಿದೆ ಎಂದ ಅವರು ತಾಲೂಕು ನೀರಾವರಿಗೆ ಒಳಪಡಲಿ ಆಗ ರೈತರಿಗೆ ಅನುಕೂಲವಾಗುತ್ತದೆ. ಇಂಡಿಯನ್ನು ಹಸಿರು ನಾಡಾಗಿ ನೋಡುವ ಭಾಗ್ಯ ನಮಗೆ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುರೇಶ ಶೇಡಶ್ಯಾಳ, ಬಿ.ಎಂ. ಕೋರೆ, ಎಚ್.ಆರ್. ಸಾಹುಕಾರ, ಬಿ.ಎಸ್. ಹಿಪ್ಪರಗಿ, ಡಾ. ಸಂಗಮೇಶ ಮೇತ್ರಿ ಮಾತನಾಡಿದರು.
ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಾರೂಢ ಮಠದ ಡಾ. ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿದ್ದರಾಜು ಎಸ್., ಬಿ.ವೈ. ಬಿರಾದಾರ, ಎ.ಬಿ. ಅಂಕದ, ಸಾಹೇಬಗೌಡ ಬಿರಾದಾರ, ವಿಜಯಕುಮಾರ ಹತ್ತಿ, ಎಸ್.ಡಿ. ಪಾಟೀಲ, ಎಸ್.ಆರ್. ಪಾಟೀಲ, ಬಿ.ಕೆ. ಗೋಟ್ಯಾಳ, ಸುಭಾಸ ಪ್ಯಾಟಿ, ಬಸವರಾಜ ಗೊರನಾಳ, ಆರ್. ಹುಂಡೇಕರ ಇತರರಿದ್ದರು.