ರೈತರಿಗೆ ಸಂಕಷ್ಟ ತಂದ ದುಬಾರಿ ಬಾಡಿಗೆ, ರಾಗಿ ಕಟಾವು ಯಂತ್ರಕ್ಕೆ ಹೆಚ್ಚಿದ ಬೇಡಿಕೆ, ಅನ್ನದಾತರಿಗೆ ಗಾಯದ ಮೇಲೆ ಬರೆ

08 Nela Ph 04 Manavi
Published on

ಬೆಂ.ಗ್ರಾಮಾಂತರ/ನೆಲಮಂಗಲ: ವಾಯುಭಾರ ಕುಸಿತದಿಂದ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೈಸುಟ್ಟುಕೊಂಡಿರುವ ರಾಗಿ ಬೆಳೆಗಾರರಿಗೆ ಈಗ ಅಳಿದುಳಿದ ರಾಗಿ ಬೆಳೆ ಕಟಾವಿಗೆ ಯಂತ್ರದ ದುಬಾರಿ ಬಾಡಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ.

2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 67,105 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದ್ದು, ಬಹುತೇಕ ರಾಗಿ ಬೆಳೆ ಕಟಾವು ಹಂತದಲ್ಲಿದ್ದು, ಎಲ್ಲ ಕಡೆಗಳಲ್ಲೂ ಕೊಯ್ಲು ಆರಂಭವಾಗಿದೆ. ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆ ಕೊಯ್ಲಿಗೆ ಯಂತ್ರಗಳನ್ನು ಬಳಸುತ್ತಿದ್ದು, ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲೀಕರು ಈ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ರೈತರಿಂದ ಪ್ರತಿ ಗಂಟೆಗೆ 3500 ರೂ.ನಿಂದ 4 ಸಾವಿರ ರೂ.ವರೆಗೆ ಬಾಡಿಗೆಗೆ ಡಿಮಾಂಡ್ ಮಾಡುತ್ತಿದ್ದಾರೆ. ಬೇಕಿದ್ದರೆ ಕೊಡಿ ಇಲ್ಲವಾದರೆ ಬಿಡಿ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಅಕಾಲಿಕ ಮಳೆಯಿಂದ ಸಾಕಷ್ಟು ಬೆಳೆ ನಷ್ಟ ಅನುಭವಿಸಿರುವ ರೈತರು ಇರುವ ಸಲನ್ನಾದರೂ ಪಡೆಯೋಣ ಎಂದರೆ ದುಬಾರಿ ಬಾಡಿಗೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ನಿಯಮಕ್ಕಿಲ್ಲ ಕಿಮ್ಮತ್ತು: ರಾಗಿ ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ 2700 ರೂಪಾಯಿ ಮೀರದಂತೆ ಬಾಡಿಗೆ ಪಡೆದು ಯಂತ್ರದ ಮಾಲೀಕರು ರೈತರಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದರೆ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಅನೇಕ ಯಂತ್ರಗಳ ಮಾಲೀಕರು ಹಣ ಸುಲಿಗೆಗಿಳಿದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಒಂದೆಡೆ ಅತೀವೃಷ್ಟಿಯಿಂದ ಕಂಗೆಟ್ಟಿರುವ ರೈತರು ದುಬಾರಿ ಬಾಡಿಗೆ ಬೇಡಿಕೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ.

ನೆಲಮಂಗಲದಲ್ಲಿ ಸಮಾವೇಶ: ನೆಲಮಂಗಲ ತಾಲೂಕಿನ ವಿವಿಧ ಸಂಘದ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ತಾಲೂಕಿನ ವಿವಿಧ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ರೈತರು ಬೆಳೆದ್ದ ರಾಗಿ ಬೆಳೆ ಕಟಾವು ಮಾಡಲು ಕೆಲ ವ್ಯಕ್ತಿಗಳು ಅತಿಹೆಚ್ಚು ಹಣ ಪಡೆಯುತ್ತಿದ್ದು ಅದಷ್ಟು ಬೇಗ ಕ್ರಮಕೈಗೊಂಡು ರೈತರಿಗೆ ಅನುಕೂಲ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ರಾಗಿ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏತನ್ಮಧ್ಯೆ ರಾಗಿ ಕಟಾವಿಗೆ ದುಬಾರಿ ದರ ಪಡೆಯುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಮಕೃಷ್ಣಪ್ಪ ಒಕ್ಕಲಿಗರ ಸಂಘದ ನೆಲಮಂಗಲ ತಾಲೂಕು ಉಪಾಧ್ಯಕ್ಷ ನೆಲಮಂಗಲ ತಾಲೂಕಿನಲ್ಲಿ ರಾಗಿ ಕಟಾವು ಯಂತ್ರಕ್ಕೆ ದುಬಾರಿ ಬಾಡಿಗೆ ಪಡೆಯುತ್ತಿದ್ದು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು, ಜಿಲ್ಲಾಧಿಕಾರಿ ಆದೇಶ ಗಾಳಿಗೆ ತೂರಿದ್ದು, ಸೂಕ್ತ ಕ್ರಮದ ಮೂಲಕ ರೈತರ ಹಿತದೃಷ್ಟಿ ಕಾಪಾಡಬೇಕು. ಬಿ.ಆರ್.ಭಾಸ್ಕರ್‌ಪ್ರಸಾದ್ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅತಿವೃಷ್ಟಿ ಸಂಕಷ್ಟದ ಸಂದರ್ಭದಲ್ಲಿ ರಾಗಿ ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ 2700 ರೂ. ಮೀರದಂತೆ ಬಾಡಿಗೆ ನಿಗದಿಪಡಿಸಲಾಗಿದ್ದು, ಈ ದರಕ್ಕಿಂತ ಹೆಚ್ಚಿನ ದರ ಪಡೆದ್ದಲ್ಲಿ, ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೆ.ಶ್ರೀನಿವಾಸ್ ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net