

ದಾವಣಗೆರೆ: ರೈತರು ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ತಕ್ಷಣ ಸೌಲಭ್ಯ ತಲುಪಿಸಿ. ವಿಳಂಬ ಬೇಡ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾ ಸಹಕಾರಿಗಳಿಂದ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ನೂತನ ಸಚಿವರು ಹಾಗೂ ಶಾಸಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಬಾರ್ಡ್- ಅಪೆಕ್ಸ್ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗಿವೆ. ಇಂತಹ ಸಂದರ್ಭದಲ್ಲಿ ಅವರೊಂದಿಗೆ ಕುಳಿತು ಮಾತನಾಡಲು ಹಿಂದೇಟೇಕೆ? ನಿಮ್ಮ ಮನೆಯಿಂದ ತಂದು ಕೊಡುತ್ತೀರಾ? ಎಂದು ನಿರ್ದೇಶಕರನ್ನು ತರಾಟೆ ತೆಗೆದುಕೊಂಡರು.
ಹೊಸ ಜಿಲ್ಲೆಗಳು ರಚನೆಯಾದಾಗ ಡಿಸಿಸಿ ಬ್ಯಾಂಕ್ ತಂದಿದ್ದೇನೆ. ಸಹಕಾರಿ ಸಂಘ ಹಾಗೂ ಬ್ಯಾಂಕ್‌ಗಳ ಸಭೆ ನಡೆಸಿ ಸುಮಾರು 80ರಿಂದ 100 ಕೋಟಿ ರೂ. ಠೇವಣಿ ಕೊಡಿಸಿದ್ದೇನೆ. ಇದುವರೆಗೂ ಬ್ಯಾಂಕ್‌ನಲ್ಲಿ ಕಂಪ್ಯೂಟರೀಕರಣ ಮಾಡಲು ಕೂಡ ಆಗಿಲ್ಲ. ಕಳೆದ ಐದು ವರ್ಷ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರೈತರಿಗೆ 1100 ಕೋಟಿ ರೂ. ಸಾಲ ನೀಡಿದೆ ಎನ್ನಲಾಗಿದೆ. ಆದರೆ, ಉತ್ತರ ಕರ್ನಾಟಕದ ಬ್ಯಾಂಕ್‌ಗಳು 300ರಿಂದ 500 ಕೋಟಿ ರೂ. ಲಾಭಾಂಶ ಗಳಿಸುತ್ತಿವೆ. ರೈತರಿಗೆ 4ರಿಂದ 5 ಸಾವಿರ ಕೋಟಿ ರೂ.ವರೆಗೆ ಸಾಲ ಒದಗಿಸುತ್ತಿವೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಮ್ಮ ಕೂಸು. ಇದನ್ನು ಎಲ್ಲರೂ ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಒಂದೆರಡು ಸಹಕಾರಿ ಬ್ಯಾಂಕ್ ಹೊರತುಪಡಿಸಿ ಎಲ್ಲವೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಬ್ಯಾಂಕ್‌ಗಳ ಮೇಲೆ ನಂಬಿಕೆ ಇದ್ದಾಗ ಮಾತ್ರ ಜನರು ಹಣ ತೊಡಗಿಸುತ್ತಾರೆ. ಎಲ್ಲರೂ ಸಹಕಾರಿ ತತ್ವ ಅಳವಡಿಸಿಕೊಂಡು ಜನರಿಗೆ ಸಹಕಾರ ಆಗುವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಮೊದಲ ಸ್ಥಾನಕ್ಕೆ ಬರಲು ಒಂದು ಕ್ರಾಂತಿ ಮಾಡಬೇಕು. ಸಹಕಾರಿ ಸೊಸೈಟಿಗಳು ಹಾಗೂ ಬ್ಯಾಂಕ್‌ಗಳು ಲೆಕ್ಕದ ವಿಚಾರದಲ್ಲಿ ಶಿಸ್ತಿನಿಂದ ನಡೆಯಬೇಕು ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಮಾದರಿಯಲ್ಲಿ ಸಹಕಾರಿ ಕ್ಷೇತ್ರದಲ್ಲೂ ಅಧಿಕಾರ ವಿಕೇಂದ್ರೀಕರಣ ತಂದು ಮೀಸಲಾತಿ ವ್ಯವಸ್ಥೆ ಕಲ್ಪಿಸಬೇಕು. ಎಸ್‌ಸಿ, ಎಸ್‌ಟಿ ಸಮುದಾಯದವರು ಸಹಕಾರಿ ಕ್ಷೇತ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗುವ ಅವಕಾಶ ಒದಗಿಸಬೇಕು ಎಂದು ಕೋರಿದರು.
ಶಾಸಕರಾದ ಡಿ.ಜಿ. ಶಾಂತನಗೌಡ, ಬಸವರಾಜ ವಿ. ಶಿವಗಂಗಾ ಹಾಗೂ ಬಿ.ದೇವೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಎಸ್. ರಾಮಪ್ಪ, ಬಿ. ಹಾಲೇಶಪ್ಪ ಇದ್ದರು. ಡಾ.ಜೆ.ಆರ್. ಷಣ್ಮುಖಪ್ಪ ಪ್ರಾಸ್ತಾವಿಕ ಮಾತನಾಡಿದರು. ಎನ್.ಜಿ.ಪುಟ್ಟಸ್ವಾಮಿ ಸ್ವಾಗತಿಸಿದರು.
ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡುವ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ಹಸುಗಳನ್ನು ಕೊಡಿಸಲು ಯೋಜಿಸಲಾಗಿದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಒಂದು ಹಸುವಿಗೆ 40 ಸಾವಿರ ರೂ. ನಂತೆ ರೈತರಿಗೆ ಸಬ್ಸಿಡಿ ಕೊಡಿಸುವ ಜವಾಬ್ದಾರಿ ನನ್ನದು. ಉಳಿದ ಹಣ ರೈತರೇ ಭರಿಸಬೇಕು. ಜಿಲ್ಲೆಯಲ್ಲಿ ಸುಮಾರು 5ರಿಂದ 10 ಸಾವಿರ ಹಸು ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗಲಿದೆ. ರೈತರ ಆರ್ಥಿಕ ಪ್ರಗತಿಯ ಜತೆಗೆ ಸರ್ಕಾರದ ಆದಾಯವೂ ಹೆಚ್ಚಾಗಲಿದೆ ಎಂದು ಹೇಳಿದರು.
ಈ ಹಿಂದೆ ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯನ್ನು ಬೇರ್ಪಡಿಸಿ ಪ್ರತ್ಯೇಕ ಹಾಲು ಒಕ್ಕೂಟ ಮಾಡುವ ಯೋಜನೆಗೆ ಕೆಲವರು ಕಲ್ಲು ಹಾಕಿದರು. ಐದಾರು ವರ್ಷಗಳ ಕೆಳಗೆ ಕೊಡಿಸಲಾಗಿದ್ದ ಜಮೀನಿನಲ್ಲಿ ಒಂದು ಲೋಡ್ ಇಟ್ಟಿಗೆ ಹಾಗೂ ಮಣ್ಣು ಏರಿಸಲಾಗಿಲ್ಲ ಎಂದರು.