ರೈತರಿಗೆ ಬ್ಯಾಂಕ್ ಸಿಬ್ಬಂದಿ ಅಸಹಕಾರ ಆರೋಪ

IMG-20230515-WA0038.jpg
Published on

ದಾವಣಗೆರೆ: ಕೊಡಗನೂರು ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ರೈತರ ವಿಚಾರಗಳಿಗೆ ಸ್ಪಂದಿಸದೆ, ಸುಳ್ಳು ವದಂತಿ ಹಬ್ಬಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಮೇ 20ರಂದು ಬ್ಯಾಂಕ್ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.

ತೀರುವಳಿಯಾದ ಸಾಲದ ಬಗ್ಗೆ ಕ್ಲಿಯರೆನ್ಸ್ ಕೇಳಿದರೆ ಕೊಡಲು ಬರುವುದಿಲ್ಲ ಎಂಬುದಾಗಿ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಹೇಳುವುದನ್ನು ಬರವಣಿಗೆಯಲ್ಲಿ ನೀಡುವಂತೆ ಒತ್ತಾಯಿಸಿದರೆ ರೈತರೇ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿರುವುದಾಗಿ ವದಂತಿ ಹಬ್ಬಿಸುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಕರಿಬಸಪ್ಪ ಮಂಗಳವಾರ ಸುದ್ದಿಗೋಷ್ಢಿಯಲ್ಲಿ ದೂರಿದರು.

ರೈತರು ಒಡವೆ ಒತ್ತೆಯಿಟ್ಟು ಸಾಲ ಪಡೆದ ಹಣವನ್ನು ಹಿಂತಿರುಗಿಸಲಾಗದ್ದಕ್ಕೆ ನೋಟಿಸ್ ನೀಡಿ ಹರಾಜು ಮಾಡಿದ್ದಾರೆ. ರೈತರ ಸಾಲ ತೀರಿಸಿ ಉಳಿದ ಹಣವನ್ನು ಖಾತೆಗಳಿಗೆ ಜಮೆ ಮಾಡದೆ ದುರ್ಬಳಕೆ ಮಾಡಲಾಗುತ್ತಿದೆ.

ತುಂತುರು ನೀರಾವರಿ ಅಳವಡಿಕೆಗೆ ಸಾಲ ನೀಡಲು ತಗಾದೆ ತೆಗೆಯುತ್ತಾರೆ. ಪದೇಪದೆ ಬ್ಯಾಂಕುಗಳಿಗೆ ಅಲೆದಾಡಿಸಲಾಗುತ್ತಿದೆ. ದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ. ನಂತರವೂ ಬ್ಯಾಂಕ್ ವ್ಯವಸ್ಥಾಪಕರು ರೈತರಿಗೆ ಸ್ಪಂದಿಸದಿದ್ದರೆ ಬ್ಯಾಂಕ್‌ನ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಗ್ಗನೂರು ಹನುಮಂತಪ್ಪ, ಮಂಜುಳಾ ಅಕ್ಕಿ, ಕೊರಟಿಕೆರೆ ಜಯಣ್ಣ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಗರಗದ ನಾಗೇಂದ್ರಪ್ಪ, ದಿಗ್ಗೇನಹಳ್ಳಿ ಶಿವಮೂರ್ತಿ, ಬಲ್ಲೂರು ಅಣ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net