

ಶಿವಮೊಗ್ಗ: ಕೃಷಿ ಇಲಾಖೆಯಿಂದ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಕಣ್ಮರೆಯಾಗುತ್ತಿರುವ ಹಾಗೂ ನಶಿಸಿಹೋಗುತ್ತಿರುವ ಸ್ಥಳೀಯ ಬೆಳೆಗಳನ್ನು ಸಂಗ್ರಹಿಸುವ, ಸಂರಕ್ಷಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ. ರೈತರು ಇಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್‌ಕುಮಾರ್ ತಿಳಿಸಿದ್ದಾರೆ. ಆಯಾ ಪ್ರದೇಶದಲ್ಲಿ ಸ್ಥಳೀಯ ಅಥವಾ ಸಾಂಪ್ರದಾಯಕ ಕೃಷಿ ಪದ್ಧತಿಯಿಂದ ಅಭಿವೃದ್ಧಿ ಮತ್ತು ನಿರ್ವಹಿಸುವ ತಳಿಗಳನ್ನು ದೇಶಿ ತಳಿಗಳೆಂದು ಕರೆಯಲಾಗುತ್ತದೆ. ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಊದಲು, ಕೊರಲೆ, ಹಾರಕ, ಬರಗು ಮತ್ತು ಇತರೆ ಬೆಳೆಗಳಲ್ಲಿ ದೇಸಿ ತಳಿಗಳಿದ್ದರೆ ಅದನ್ನು ಸಲಹಾ ಸಮಿತಿಗೆ ಶಿಫಾರಸು ಮಾಡಲು ರೈತರು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಬೀಜ ಬ್ಯಾಂಕ್‌ನಲ್ಲಿರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ಧರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಪುನರುತ್ಪಾದಕ ಕೃಷಿ ಮತ್ತು ಇತರೆ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು. ಆಸಕ್ತ ರೈತರು ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.