

ಹಾಸನ: ಮುಂಗಾರು ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಭೀಜ, ಗೊಬ್ಬರ ಹಾಗೂ ಕ್ರಿಮಿನಾಶಕಗಳ ಲಭ್ಯತೆ ಯಾವುದೇ ರೀತಿ ಕೊರತೆಯಾಗದಂತೆ ಜಿಲ್ಲಾಧಿಕಾರಿಗಳು ಆದ್ಯತೆಯಲ್ಲಿ ಗಮನಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು .
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಜಿ.ಪಂ ಸಿ.ಇ.ಓ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರಗಾಲ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಮುಂಗಾರು ಪೂರ್ವ ಮಳೆ ಎಲ್ಲೆಡೆ ಉತ್ತಮವಾಗಿದೆ. ಹೀಗಾಗಿ ಬಿತ್ತನೆ ಕಾರ್ಯ ಚುರುಕಾಗಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಗಳು ಇದರ ಮೇಲುಸ್ತುವಾರಿ ವಹಿಸಬೇಕು ಸೂಚಿಸಿದರು.
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ನೋಡಬೇಕು. ರಾಜ್ಯದಲ್ಲಿ ದಾಸ್ತಾನು ಸಾಕಷ್ಟಿದೆ. ಆದರೆ ಜಿಲ್ಲಾ, ತಾಲೂಕಿಗೆ ಬೇಡಿಕೆಯನುಗುಣವಾಗಿ ಬೀಜ, ರಸಗೊಬ್ಬರ, ಕೀಟನಾಶಕ ಸರಿಯಾಗಿ ಪೂರೈಸಬೇಕು. ಇದಕ್ಕೆ ಸರಿಯಾಗಿ ಪ್ಲ್ಯಾನ್ ಮಾಡಿ ವಿತರಣೆ ಮಾಡಬೇಕು. ರೈತರಿಂದ ದೂರು ಬಾರದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ತಮ್ಮಲ್ಲಿರುವ ದಾಸ್ತಾನುಗಳ ಬಗ್ಗೆ ನಿಯಮಿತವಾಗಿ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಮಳೆಗಾಲ ಆರಂಭವಾದ ನಂತರ ಹೊಸ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯು ಈಗಿನಿಂದಲೆ ಪೂರ್ವ ತಯಾರಿ ಮಾಡಿಕೊಂಡು ಅದರ ನಿಯಂತ್ರಣಕ್ಕೆ ಮುಂದಾಗಬೇಕು. ಎಲ್ಲಿಯೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕು. ನೀರು ಪೂರೈಕೆ ಮುನ್ನ ಅದು ಕುಡಿಯಲು ಯೋಗ್ಯವಿದೆಯೇ ಎಂದು ಪರೀಕ್ಷಿಸಿ ಪೂರೈಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭೆ ಚುನಾವಣೆಯ ಮತದಾನ ಮುಕ್ತಾವಾಗಿರುವುದರಿಂದ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತಿಯಿಂದ ಸಡಿಲಿಕೆ ನೀಡಿರುವುದರಿಂದ ಬರಗಾಲ ನಿರ್ವಹಣೆ ಸೇರಿದಂತೆ ಅಭಿವೃದ್ಧಿ ಕೆಲಸದ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಯೋಜನೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಸಿ.ಎಂ. ಅವರೊಂದಿಗೆ ಭಾಗಿಯಾಗಿದ್ದರು.
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಳಾ ಸೇರಿ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.